ರಾಜ್ಯ

ರೆಕಾರ್ಡ್ ಬರಹ ಪದ್ಧತಿ ತೆಗೆದು ಹಾಕುವಂತೆ ಸಿಎಂಗೆ ಮಹಾರಾಣಿ ಕಾಲೇಜು ವಿದ್ಯಾರ್ಥಿನಿ ಮನವಿ

Sumana Upadhyaya

ಬೆಂಗಳೂರು: ಪ್ರತಿದಿನದ ದಾಖಲೆಗಳ ಬರಹದಿಂದ(ರೆಕಾರ್ಡ್ಸ್ ರೈಟಿಂಗ್) ಬೇಸತ್ತು ನಗರದ ಕಾಲೇಜಿನಲ್ಲಿ ಬಿ.ಎಸ್ಸಿ ವ್ಯಾಸಂಗ ಪಡೆಯುತ್ತಿರುವ ವಿದ್ಯಾರ್ಥಿನಿಯೊಬ್ಬರು ಮುಖ್ಯಮಂತ್ರಿಗೆ ಪತ್ರ ಬರೆದು ಈ ಪದ್ಧತಿಯನ್ನು ವಿಜ್ಞಾನ ಪದವಿ ಹಂತದಲ್ಲಿಯಾದರೂ ತೆಗೆದುಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಮಹಾರಾಣಿ ಮಹಿಳಾ ಕಾಲೇಜಿನ ಅಂತಿಮ ವರ್ಷದ ಬಿ ಎಸ್ಸಿ ವಿದ್ಯಾರ್ಥಿನಿ ಸಿರಿಶಾ ಎಂ ಡಿ ಮೊನ್ನೆ ಬುಧವಾರ ಸೆಂಟ್ರಲ್ ಕಾಲೇಜು ಕ್ಯಾಂಪಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಗಡಿಬಿಡಿಯಲ್ಲಿದ್ದರೂ ಕೂಡ ಮುಖ್ಯಮಂತ್ರಿ ಕುಮಾರಸ್ವಾಮಿ ವಿದ್ಯಾರ್ಥಿನಿ ಜೊತೆ ಮಾತನಾಡಿ ಆಕೆಯ ಹೆಸರು ಮತ್ತು ಕಾಲೇಜು ಕೇಳಿದರು.

ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಿದ್ಯಾರ್ಥಿನಿ, ರೆಕಾರ್ಡ್ ಗಳನ್ನು ಬರೆಯಲು ವಿಜ್ಞಾನ ವಿದ್ಯಾರ್ಥಿನಿಯರು ಎದುರಿಸುತ್ತಿರುವ ತೊಂದರೆಯನ್ನು ವಿವರಿಸಿದ್ದಾಳೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಸಿರಿಶಾ, ರೆಕಾರ್ಡ್ ಗಳನ್ನು ಬರೆಯಲು ನಾವು ಪ್ರತಿ ವಾರದಲ್ಲಿ ಕನಿಷ್ಠವೆಂದರೂ 2 ದಿನಗಳ ರಾತ್ರಿಗಳನ್ನು ನಿದ್ದೆಮಾಡದೆ ಕಳೆಯಬೇಕಾಗುತ್ತದೆ. ಬುಧವಾರ ರಾತ್ರಿ ಕೂಡ ನಾನು ರೆಕಾರ್ಡ್ ಬರೆದು ಮುಗಿಸಿ ಮಲಗುವಾಗ ಬೆಳಗ್ಗೆ 3 ಗಂಟೆಯಾಗಿತ್ತು. ಇದು ಕೇವಲ ನನ್ನ ಸಮಸ್ಯೆ ಮಾತ್ರವಲ್ಲ, ಪದವಿ ತರಗತಿ ಓದುತ್ತಿರುವ ಎಲ್ಲಾ ವಿಜ್ಞಾನ ವಿದ್ಯಾರ್ಥಿಗಳು ಇದನ್ನು ಎದುರಿಸುತ್ತಾರೆ ಎಂದಳು.

ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮುನ್ನ ನನ್ನ ಸ್ನೇಹಿತರು ಮತ್ತು ಶಿಕ್ಷಕರ ಜೊಚೆ ಚರ್ಚೆ ಮಾಡಿ ಬರೆದಿದ್ದೇನೆ. ಅವರು ಮುಖ್ಯಮಂತ್ರಿಗೆ ಪತ್ರ ಬರೆಯಲು ನನಗೆ ಪ್ರೋತ್ಸಾಹ ನೀಡಿದರು. ಇದಕ್ಕೆ ಮುಖ್ಯಮಂತ್ರಿಗಳು ಏನಾದರೊಂದು ಪರಿಹಾರ ನೀಡುತ್ತಾರೆ ಎಂದು ಭಾವಿಸುತ್ತೇನೆ ಎನ್ನುತ್ತಾಳೆ.

ರೆಕಾರ್ಡ್ ಬರೆಯುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚಿನ ಅನುಭವ ಸಿಗುವುದಿಲ್ಲ. ಅದು ಕಾಪಿ, ಪೇಸ್ಟ್ ಕೆಲಸವಷ್ಟೆ, ನಮ್ಮ ಸ್ವಂತಿಕೆ ಬಳಸಿ ಮಾಡಿ ಜ್ಞಾನ ಪಡೆಯಲು ಏನೂ ಇಲ್ಲ ಎಂದು ಪತ್ರದಲ್ಲಿ ನಮೂದಿಸಿದ್ದಾಳೆ. ರೆಕಾರ್ಡ್ ಬರಹಕ್ಕೆ ವಿದ್ಯಾರ್ಥಿಗಳಿಗೆ 5 ಅಂಕಗಳಿರುತ್ತದೆ.

ಮುಖ್ಯಮಂತ್ರಿಗಳು ಪತ್ರವನ್ನು ಉನ್ನತ ಶಿಕ್ಷಣ ಇಲಾಖೆಗೆ ಕಳುಹಿಸಿದ್ದು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಆದರೆ ಉಪನ್ಯಾಸಕರು ಹೇಳುವ ಪ್ರಕಾರ, ಇದು ವಿದ್ಯಾರ್ಥಿಗಳಿಗೆ ಪ್ರಯೋಗಾಲಯದಲ್ಲಿ ಏನು ಮಾಡಿದ್ದೇವೆ ಎಂದು ಮೆಲುಕು ಹಾಕಲು ಒಳ್ಳೆಯದಾಗುತ್ತದೆ. ಕೇವಲ ಅಂಕ ಗಳಿಕೆಯೇ ಇದರ ಉದ್ದೇಶವಲ್ಲ, ಹಲವಾರು ವರ್ಷಗಳಿಂದ ಇದು ನಡೆಯುತ್ತಾ ಬಂದಿದೆ ಎನ್ನುತ್ತಾರೆ ಸರ್ಕಾರಿ ವಿಜ್ಞಾನ ಕಾಲೇಜಿನ ಹಿರಿಯ ಉಪನ್ಯಾಸಕ ಪ್ರೊ.ಕೆ ರಾಮಕೃಷ್ಣ ರೆಡ್ಡಿ.

SCROLL FOR NEXT