ಹಾಸನ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಎಲ್ಲಾ ಊಹಾಪೋಹಗಳಿಗೆ ಸ್ವತಃ ಮೈಸೂರು ರಾಜ ಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೆರೆ ಎಳೆದಿದ್ದಾರೆ.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜನೆ ಮಾಡಿರುವ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜಕೀಯದ ಬಗ್ಗೆ ಸದ್ಯಕ್ಕೆ ನನಗೆ ಆಸಕ್ತಿಯಿಲ್ಲ. ಹಿಂದಿನಿಂದಲೂ ಜನರೊಂದಿಗೆ ರಾಜಪರಂಪರೆಯ ನಂಟು ಇದೆ. ಆ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವದಷ್ಟೇ ನನ್ನ ಮುಂದಿರುವ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದ್ದಾರೆ.
ಭವಿಷ್ಯದಲ್ಲಿ ಚುನಾವಣೆ ನಿಲ್ಲುವ ಬಗ್ಗೆ ಉತ್ತರ ನೀಡಲು ಯದುವೀರ್ ನಿರಾಕರಿಸಿದ್ದು, ನಾನು ವಿದೇಶದಲ್ಲಿ ಇದ್ದುದರಿಂದ ನೆರೆ ಹಾವಳಿಯಿಂದ ತತ್ತರಿಸಿ ಹೋಗಿರುವ ಕೊಡಗಿಗೆ ಭೇಟಿ ಕೊಡಲು ಸಾಧ್ಯವಿಲ್ಲ. ಆದಷ್ಟು ಶೀಘ್ರದಲ್ಲೇ ಮಡಿಕೇರಿಗೆ ಭೇಟಿ ನೀಡುವೆ ಎಂದು ತಿಳಿಸಿದರು