ಬೆಂಗಳೂರು: ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಇತರ ಕೆಲವು ಜಿಲ್ಲೆಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯ ಮಾಡಲು ಅಗತ್ಯ ಹಣಕಾಸಿನ ನೆರವು ನೀಡುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಇದಕ್ಕಾಗಿ ಕೇಂದ್ರದಿಂದ ಎರಡು ತಂಡಗಳನ್ನು ಕಳುಹಿಸಿ ಪ್ರವಾಹದಿಂದ ಉಂಟಾದ ಹಾನಿ ಮತ್ತು ನಷ್ಟದ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಕೂಡ ಪ್ರಧಾನ ಮಂತ್ರಿ ತಿಳಿಸಿದ್ದಾರೆ. ನಿನ್ನೆ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿದ್ದ ರಾಜ್ಯ ನಿಯೋಗ ಕೇಂದ್ರದಿಂದ 2 ಸಾವಿರ ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ನ್ನು ಕೇಳಿತ್ತು.
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ನಿಯೋಗ ನಿನ್ನೆ ದೆಹಲಿಯಲ್ಲಿ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿತ್ತು.ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕಂದಾಯ ಸಚಿವ ಆರ್. ವಿ.ದೇಶಪಾಂಡೆ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮುಖ್ಯಮಂತ್ರಿ ಗಳೊಂದಿಗೆ ನಿಯೋಗದಲ್ಲಿ ಇದ್ದರು.
ಕಳೆದ ಪ್ರವಾಹ ಪೀಡಿತ ಮಳೆಗೆ ರಾಜ್ಯದಲ್ಲಿ ಒಟ್ಟಾರೆ ಸುಮಾರು 8 ಸಾವಿರ ಕೋಟಿ ರೂಪಾಯಿಗಳಷ್ಟು ಆಸ್ತಿಪಾಸ್ತಿ ನಷ್ಟವಾಗಿದ್ದು ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ 2 ಸಾವಿರ ಕೋಟಿ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರ ಕೋರಿದೆ.
ಪ್ರಧಾನಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ 17 ಜಿಲ್ಲೆಗಳ 86 ತಾಲ್ಲೂಕುಗಳಲ್ಲಿನ ಜನರು ಬರಗಾಲಕ್ಕೆ ತುತ್ತಾಗಿ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಕೂಡ ಹೇಳಿತು. ಬರಪೀಡಿತ ಜಿಲ್ಲೆಗಳಿಗೆ ಮೇವು ಮತ್ತು ಕುಡಿಯುವ ನೀರು ಒದಗಿಸಲು ಕೇಂದ್ರದ ನೆರವನ್ನು ಕೂಡ ಇದೇ ಸಂದರ್ಭದಲ್ಲಿ ಕೇಳಿತು.
ಭೇಟಿ ಸಂದರ್ಭದಲ್ಲಿ ಕಾವೇರಿ ತೀರದಲ್ಲಿರುವ ಮೇಕೆದಾಟು ಯೋಜನೆ ಕೂಡ ಚರ್ಚೆಗೆ ಬಂತು. ಈ ಸಂಬಂಧ ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳ ಸಭೆ ಕರೆದು ಮೇಕೆದಾಟು ಯೋಜನೆ ಕುರಿತು ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವಂತೆ ಪ್ರಧಾನ ಮಂತ್ರಿಯವರನ್ನು ಮನವಿ ಮಾಡಲಾಯಿತು.
ಪ್ರಧಾನಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನಮ್ಮ ಮನವಿಗೆ ಪ್ರಧಾನ ಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೇಂದ್ರದಿಂದ ಅಗತ್ಯ ನೆರವು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ನಾವು ಕೇಂದ್ರದಿಂದ 2 ಸಾವಿರ ಕೋಟಿ ರೂಪಾಯಿ ನೆರವು ಕೇಳುತ್ತಿದ್ದೇವೆ ಎಂದರು.
ಕೇಂದ್ರದ ತಂಡ ಇಂದು ನಗರಕ್ಕೆ: ಪ್ರವಾಹ ಪೀಡಿತ ಜಿಲ್ಲೆಗಳ ಪರಿಸ್ಥಿತಿ ಅಧ್ಯಯನ ಮಾಡಲು 6 ಸದಸ್ಯರ ಕೇಂದ್ರ ತಂಡ ಬೆಂಗಳೂರಿಗೆ ಇಂದು ಆಗಮಿಸಲಿದೆ. ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್ ಅವರ ನೇತೃತ್ವದ ತಂಡ ಇಂದು ನಗರಕ್ಕೆ ಆಗಮಿಸಲಿದೆ. ನಾಳೆ ಮೂವರು ಸದಸ್ಯರ ತಂಡ ಕೊಡಗು ಜಿಲ್ಲೆಗೆ ಮತ್ತು ಉಳಿದವರು ಉಡುಪಿ, ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಗಳಿಗೆ ಭೇಟಿ ನೀಡಲಿವೆ.
ನಂತರ ತಂಡ ಇದೇ14ರಂದು ಸಂಬಂಧಪಟ್ಟ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿ ಕೇಂದ್ರ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದೆ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.