ಮಂಡ್ಯ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ನಡೆದಿದೆ.
ಸಾಲಭಾದೆ ನಂದೀಶ್(40), ಕೋಮಲ(32) ಪುತ್ರಿ ಚಂದನಾ(13) ಹಾಗೂ ಪುತ್ರ ಮನೋಜ್(11) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಸಾಲಭಾದೆಯಿಂದ ತತ್ತರಿಸಿದ್ದ ಈ ಕುಟುಂಬ, ತಮ್ಮ ಜಮೀನಿನ ಬಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ನಂದೀಶ್ ಅವರ ತಂದೆ ಕೆಂಪೇಗೌಡ ಹೆಸರಿನಲ್ಲಿ ಸುಮಾರು 3 ಎಕರೆ ಜಮೀನು ಇದೆ. ನಂದೀಶ್ ಕೆಂಪೇಗೌಡರ ಏಕೈಕ ಪುತ್ರನಾಗಿದ್ದ ಕಾರಣ ಜಮೀನಿನ ಎಲ್ಲಾ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿದ್ದು, ಬೇಸಾಯ ಮಾಡಲು ಸುಮಾರು 10 ಲಕ್ಷ ರುಪಾಯಿ ಸಾಲ ಮಾಡಿದ್ದರು ಎನ್ನಲಾಗಿದೆ.
ಸುಂಕಾತೊಣ್ಣೂರು ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ 4.50 ಲಕ್ಷ ರುಪಾಯಿ ಬೆಳೆಸಾಲ, ಸುಮಾರು 6 ಲಕ್ಷ ರುಪಾಯಿ ಕೈಸಾಲ ಹಾಗೂ ಚಿಕ್ಕಾಡೆ ವಿಜಯ ಬ್ಯಾಂಕ್ ನಲ್ಲಿ ಚಿನ್ನಾಭರಣ ಅಡಮಾನವಿಟ್ಟು ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.
ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ನಂದೀಶ್ ಅವರು ಸಿಎಂ ಕುಮಾರಸ್ವಾಮಿ ಅವರಿಗೂ ಎರಡು ಬಾರಿ ಪತ್ರ ಬರೆದು, ಸಾಲಗಾರರಿಂದ ಮುಕ್ತಿ ಕೊಡಿಸಿ ಎಂದು ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ, ಇತ್ತೇಚೆಗೆ ಸಾಲಗಾರರ ಒತ್ತಡ ಹೆಚ್ಚಾದ ಕಾರಣ ಶುಕ್ರವಾರ ರಾತ್ರಿ ಕುಟುಂಬ ಸಮೇತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಮಂಡ್ಯದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಾಸಕ ಪುಟ್ಟರಾಜು ಅವರ ಬಳಿ ಮಾಹಿತಿ ಪಡೆದಿದ್ದೇನೆ. ಅವರು ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ರೀತಿಯ ಕಠಿಣ ನಿರ್ಧಾರ ಕೈಗೊಳ್ಳಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ನಂದೀಶ್ ಕುಟುಂಬಸ್ಥರು ಒಮ್ಮೆ ನನ್ನ ಬಳಿ ಬಂದು ಸಮಸ್ಯೆ ಹೇಳಿಕೊಂಡಿದ್ದರು. ಈಗ ತಾನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಏನೇ ಸಮಸ್ಯೆ ಇದ್ದರೂ, ಬಗೆಹರಿಸುತ್ತೇನೆ ಸ್ವಲ್ಪ ಸಮಯ ಕೊಡಿ ಎಂದು ಹೇಳಿ ಕಳಿಸಿದ್ದೆ. ಆದರೆ, ಅವರು ತುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics