ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಸಂಪತ್ ರಾಜ್ ಅವರ ಅಧಿಕಾರಾವಧಿ ಇದೇ 27ಕ್ಕೆ ಕೊನೆಯಾಗಲಿದೆ. ತಮ್ಮ ಉತ್ತರಾಧಿಕಾರಿಗೆ ಅಧಿಕಾರದ ಪಟ್ಟದ ಜೊತೆ ನಗರದ ಹಲವು ಸಮಸ್ಯೆಗಳನ್ನು ಬಿಟ್ಟುಹೋಗುತ್ತಿದ್ದಾರೆ ಮೇಯರ್ ಸಂಪತ್ ರಾಜ್.
ಬಿಬಿಎಂಪಿ ಮೇಯರ್ ಚುನಾವಣೆ ಇದೇ ತಿಂಗಳ 28ರಂದು ನಡೆಯಲಿದೆ. ಇಷ್ಟು ವರ್ಷ ಹೊಸ ಮೇಯರನ್ನು ನಿರ್ಗಮಿತ ಮೇಯರ್ ಕೈಯಲ್ಲೊಂದು ಹೂವಿನ ಗುಚ್ಛ ನೀಡಿ ಕೈಕುಲುಕುವುದರೊಂದಿಗೆ ಸ್ವಾಗತಿಸುತ್ತಿದ್ದರು. ಆದರೆ ಕಳೆದ ಬಿಬಿಎಂಪಿ ಬಜೆಟ್ ನಲ್ಲಿ ಬೆಳ್ಳಿಯ ಕೆಂಪೇಗೌಡ ಮೂರ್ತಿ, ಬೆಳ್ಳಿಯ ಬಟನ್ ಮತ್ತು ಬೆಳ್ಳಿಯ ಕೀಲಿ ಬೆಳ್ಳಿಯ ಡಬ್ಬಿಯಲ್ಲಿ ಹಾಕಿ ಹೊಸ ಮೇಯರ್ ಗೆ ನೀಡಲಾಗುತ್ತದೆ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಪುಸ್ತಕದಲ್ಲಿ ಅದನ್ನು ಬರೆಯಲಾಗಿದೆ.
ಇಷ್ಟೆಲ್ಲಾ ವಸ್ತುಗಳಿಗಾಗಿ ಬಜೆಟ್ ನಲ್ಲಿ 15 ಲಕ್ಷ ರೂಪಾಯಿ ಮೀಸಲಿಡಲಾಗುತ್ತದೆ. ಅದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಸರ್ಕಾರದ ಒಪ್ಪಿಗೆ ಪಡೆದು ಟೆಂಡರ್ ಆಹ್ವಾನಿಸಲಾಗಿದೆ. ಈ ಎಲ್ಲಾ ಬೆಳ್ಳಿಯ ವಸ್ತುಗಳು ಸೇರಿ 25 ಕೆಜಿ ತೂಕ ತೂಗಿದ್ದು ಅದಕ್ಕಾಗಿ 22 ಲಕ್ಷ ವೆಚ್ಚ ಮಾಡಲಾಗಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮೇಯರ್ ಸಂಪತ್ ರಾಜ್, ಬೆಂಗಳೂರು ನಗರಕ್ಕೆ ಅದರದ್ದೇ ಆದ ಇತಿಹಾಸ, ಪಾವಿತ್ರ್ಯತೆ ಇದೆ. ನಾಡಪ್ರಭು ಕೆಂಪೇಗೌಡ ಕಟ್ಟಿಸಿದ ಊರಾದ ಬೆಂಗಳೂರಿನ ಸಂಪದ್ಭರಿತ ಗುರುತಿಗಾಗಿ ನಾವು ಕೆಂಪೇಗೌಡರ ಬೆಳ್ಳಿಯ ಮೂರ್ತಿಯನ್ನು, ಕೀ ಮತ್ತು ಬಟನ್ ನ್ನು ಆರಿಸಿದ್ದೇವೆ. ಅದನ್ನು ಹೊಸ ಮೇಯರ್ ಅಧಿಕಾರ ಸ್ವೀಕರಿಸುವಾಗ ನೀಡುತ್ತೇವೆ, ಅದನ್ನು ಅವರು ಕಾಪಾಡಿಕೊಂಡು ಹೋಗಬೇಕು ಎನ್ನುತ್ತಾರೆ.
ಬೆಂಗಳೂರಿನಲ್ಲಿ ಬಗೆಹರಿಯದಿರುವ ಹತ್ತಾರು ಸಮಸ್ಯೆಗಳ ಬಗ್ಗೆ ಕೇಳಿದಾಗ ಆ ಬಗ್ಗೆ ನನ್ನ ಅಧಿಕಾರದ ಕೊನೆ ದಿನ ಮಾತನಾಡುತ್ತೇನೆ ಎಂದರು.
ಬಗೆಹರಿಯದಿರುವ ಬೆಂಗಳೂರು ಸಮಸ್ಯೆಗಳು: ರಸ್ತೆಗಳಲ್ಲಿನ ಗುಂಡಿಗಳು, ಕಸ ವಿಲೇವಾರಿ, ಮಳೆ ಸಮಯದಲ್ಲಿ ರಸ್ತೆ, ಚರಂಡಿಗಳಲ್ಲಿ ನೀರು ತುಂಬುವುದು, ಹಾಳಾದ ರಸ್ತೆಗಳು, ಕೆರೆಗಳ ನಿರ್ವಹಣೆ, ಭೂ ಒತ್ತುವರಿ, ಹಸಿರು ಬೆಂಗಳೂರನ್ನು ಕಾಪಾಡುವುದು, ನಾಗರಿಕ ಕೆಲಸಗಳಿಗೆ ಬಿಬಿಎಂಪಿಯಲ್ಲಿ ಹಣದ ಕೊರತೆ ಇತ್ಯಾದಿ ಹತ್ತು ಹಲವು ಸಮಸ್ಯೆಗಳಿಂದ ಬೆಂಗಳೂರು ಬಳಲುತ್ತಿದ್ದು ಅವೆಲ್ಲವೂ ಮುಂದಿನ ಮೇಯರ್ ಗೆ ಸವಾಲಾಗಿದೆ ಎನ್ನುತ್ತಾರೆ ಜೆಡಿಎಸ್ ನಾಯಕರೊಬ್ಬರು.