ನವದೆಹಲಿ: ತಮಿಳು ನಾಡಿ ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಅಧಿನಾಯಕಿಯಾಗಿದ್ದ ಜೆ. ಜಯಲಲಿತಾ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಗೆ ಕರ್ನಾಟಕ ಸಲ್ಲಿಸಿದ್ದ ಕ್ಯೂರಿಯಟ್ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾ ಮಾಡಿದೆ.
ಇದರಿಂದಾಗಿ ಮೃತ ಜಯಲಲಿತಾ ಅವರ ಕಡೆಯಿಂದ ರಾಜ್ಯ ಸರ್ಕಾರ ವಸೂಲು ಮಾಡಬೇಕಾಗಿದ್ದ ದಂಡದ ಮೊತ್ತ ಸಂಗ್ರಹಣೆಗೆ ಸಹ ಹಿನ್ನಡೆಯಾಗಿದೆ.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ತನ್ನ ನಿಲುವನ್ನು ಮರುಪರಿಶೀಲಿಸಿ ಎಂದು ಕೋರಿ ರಾಜ್ಯ ಸರ್ಕಾರ ಸುಪ್ರೀಂ ನಲ್ಲಿ ಕ್ಯೂರಿಯಟ್ ಅರ್ಜಿ ಸಲ್ಲಿಸಿತ್ತು. ಅಕ್ರಮ ಆಸ್ತಿ ಗಳಿಕೆ ಆರೋಪಿಯಾಗಿದ್ದ ಜಯಲಲಿತಾ ಅವರಿಗೆ ಬೆಂಗಳೂರು ನ್ಯಾಯಾಲಯ 2014 ಸೆಪ್ಟೆಂಬರ್ ನಲ್ಲಿ 4 ವರ್ಷ ಜೈಲು ಮತ್ತು 100 ಕೋಟಿ ರೂ. ದಂಡ ವಿಧಿಸಿತ್ತು.
ಆದರೆ 2015ರ ಜನವರಿಯಲ್ಲಿ ಪ್ರಕರಣ ಕುರಿತ ಸ್ಥಳೀಯ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು.ಜಯಲಲಿತಾ ಸೇರಿ ನಾಲ್ವರು ಆರೋಪಿಗಳು ನಿರ್ದೋಷಿಗಳು ಎಂದಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಮೊರೆ ಹೋಗಿತ್ತು.
ಇಷ್ಟರ ನಡುವೆ 2016ರ ಡಿಸೆಂಬರ್ 5ರಂದು ಜಯಲಲಿತಾ ಚೆನ್ನೈನಲ್ಲಿ ಅಸುನೀಗಿದ್ದರು. 2017ರ ಫೆಬ್ರವರಿಯಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಶಶಿಕಲಾ ನಟರಾಜನ್ ಸೇರಿ ಮೂವರು ಆರೋಪಿಗಳಿಗೆ ನಾಲ್ಕು ವರ್ಷದ ಜೈಲುವಾಸ ಶಿಕ್ಷೆ ವಿಧಿಸಿತ್ತು. ಆದರೆ ಅದಾಗಲೇ ಮೃತರಾದ ಜಯಲಲಿತಾ ಅವರ ಹೆಸರನ್ನು ಪ್ರಕರಣದಿಂದ ಕೈಬಿಟ್ಟದ್ದನ್ನು ರಾಜ್ಯ ಸರ್ಕಾರ ಪ್ರಶ್ನಿಸಿದ್ದು ಅವರಿಂದ ವಸೂಲಾಗಬೇಕಿದ್ದ 100 ಕೋಟಿ ದಂಡ ವಸೂಲಿ ಆಗಬೇಕು ಎಂದು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಆದರೆ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಕ್ಯುರಿಯಟ್ ಅರ್ಜಿ ಮೂಲಕ ಕರ್ನಾಟಕ ಸರ್ಕಾರ ಮತ್ತೆ ಸುಪ್ರೀಂನಲ್ಲಿ ಅರ್ಜಿ ಹಾಕಿದ್ದು ಇಂದು ಆ ಅರ್ಜಿ ವಜಾ ಆಗಿದೆ.