ಮೈಸೂರು: ಶಾಸಕ ಮತ್ತು ಸರ್ಕಾರಿ ವೈದ್ಯೆಯ ನಡುವಿನ ಜಟಾಪಟಿಯಲ್ಲಿ ರಾಜ್ಯ ಸರ್ಕಾರ ವೈದ್ಯೆಯ ಪರವಾಗಿ ನಿಂತಿದೆ. ಕಳೆದ ಸೆಪ್ಟೆಂಬರ್ 18ರಂದು ರಾತ್ರಿ ಜೆಡಿಎಸ್ ಶಾಸಕ ಮಹದೇವ್ ಅವರ ಮನೆಗೆ ಹೋಗಿ ಡಾ ವೀಣಾ ಸಿಂಗ್ ಆರೋಗ್ಯ ಸೇವೆ ನೀಡಲು ನಿರಾಕರಿಸಿದ್ದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಆರೋಗ್ಯ ಇಲಾಖೆ ನಿರ್ದೇಶಕ ಎಸ್ ಪುಷ್ಪರಾಜ್, ವೈದ್ಯೆ ಡಾ ವೀಣಾ ಸಿಂಗ್ ಯಾವುದೇ ತಪ್ಪು ಮಾಡದಿರುವುದರಿಂದ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ನಿನ್ನೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಾ ವೀಣಾ ಸಿಂಗ್ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳದಿರಲು ಮತ್ತು ಅವರನ್ನು ವರ್ಗಾವಣೆ ಮಾಡದಿರಲು ತೀರ್ಮಾನಿಸಲಾಯಿತು ಎಂದರು. ವೈದ್ಯೆ ವೀಣಾ ಸಿಂಗ್ ಕೂಡ ಸಭೆಯಲ್ಲಿ ಹಾಜರಿದ್ದರು.
ತಾವು ಆಸ್ಪತ್ರೆಯಲ್ಲಿ ಬ್ಯುಸಿಯಾಗಿದ್ದ ಕಾರಣ ಶಾಸಕರ ಮನೆಗೆ ಹೋಗಿ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ ಎಂದ ವೀಣಾ ಸಿಂಗ್ ಅವರಿಗೆ ಶೋಕಾಸ್ ನೊಟೀಸ್ ನೀಡಲಾಗಿತ್ತು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೀಣಾ ಸಿಂಗ್ ಸ್ತ್ರೀ ರೋಗ ತಜ್ಞೆಯಾಗಿದ್ದಾರೆ. ಆಸ್ಪತ್ರೆಯಿಂದ ಕೇವಲ 100 ಮೀಟರ್ ದೂರದಲ್ಲಿರುವ ಅಸೌಖ್ಯಕ್ಕೀಡಾಗಿದ್ದ ತಮ್ಮನ್ನು ಹಂದು ವಿಚಾರಿಸಿ ಆರೋಗ್ಯ ಸೇವೆ ನೀಡಲು ವೈದ್ಯೆ ನಿರಾಕರಿಸಿದ್ದರು ಎಂದು ಜೆಡಿಎಸ್ ಶಾಸಕ ಮಹದೇವ್ ಹಕ್ಕು ಸಮಿತಿಗೆ ದೂರು ನೀಡಿ ಈ ಬಗ್ಗೆ ತನಿಖೆ ನಡೆಸಿ ವೈದ್ಯೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ಕಳೆದ ಸೆಪ್ಟೆಂಬರ್ 18ರಂದು ಜೆಡಿಎಸ್ ಶಾಸಕ ಮಹದೇವ್ ಪಂಚಾಯತ್ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲನ್ನು ಸ್ವೀಕರಿಸುತ್ತಿದ್ದಾಗ ಬಿಪಿ ಮತ್ತು ಶುಗರ್ ಮಟ್ಟ ಹಠಾತ್ತಾಗಿ ಕಡಿಮೆಯಾಗಿ ಕುಸಿದುಬಿದ್ದಿದ್ದರು. ತಕ್ಷಣ ಅವರನ್ನು ಮನೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಸ್ವಲ್ಪ ಸುಧಾರಿಸಿದಂತೆ ಕಂಡುಬಂದರೂ ನಿತ್ರಾಣ ಆಗುತ್ತಿತ್ತು.
ಆಹಾರ ಸೇವಿಸಲು ಸಹ ಸಾಧ್ಯವಾಗುತ್ತಿರಲಿಲ್ಲ. ಅವರ ಪತ್ನಿ ಮತ್ತು ಮಗ ಆಟೋರಿಕ್ಷಾ ಕರೆಸಿ ಚಾಲಕನಲ್ಲಿ ತುರ್ತು ಕೇಸು ಎಂದು ಪಕ್ಕದ ಸರ್ಕಾರಿ ಆಸ್ಪತ್ರೆಯ ವೈದ್ಯೆಯನ್ನು ಬರಲು ಹೇಳುವಂತೆ ಸೂಚಿಸಿದರು. ಆದರೆ ರಾತ್ರಿ ಹೊತ್ತಿನಲ್ಲಿ ವೈದ್ಯೆ ಬರಲು ನಿರಾಕರಿಸಿದ್ದರು.
ಅಂದು ರಾತ್ರಿ ಗರ್ಭಿಣಿಯೊಬ್ಬರ ಹೆರಿಗೆ ಮಾಡಿಸುತ್ತಿದ್ದರಿಂದ ಮತ್ತು ಮತ್ತೊಂದು ಅಪಘಾತವಾದ ರೋಗಿಗೆ ಚಿಕಿತ್ಸೆ ನೀಡುತ್ತಿದ್ದರಿಂದ ಶಾಸಕರ ಮನೆಗೆ ಹೋಗಲಾಗಲಿಲ್ಲ ಎಂದು ವೈದ್ಯೆ ವೀಣಾ ಸಿಂಗ್ ತಿಳಿಸಿದ್ದರು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಅವರಿಗೆ ಶೋಕಾಸ್ ನೊಟೀಸ್ ನೀಡಿದ್ದರು. ಅಂದು ರಾತ್ರಿ ಕರ್ತವ್ಯದಲ್ಲಿ ವೀಣಾ ಸಿಂಗ್ ಮಾತ್ರ ಇದ್ದುದರಿಂದ ಆಸ್ಪತ್ರೆ ಬಿಟ್ಟು ಹೋಗಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.
ಕೊನೆಗೆ ಶಾಸಕರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮರುದಿನ ಶಾಸಕ ಮಹದೇವ್ ಸರ್ಕಾರಿ ಆಸ್ಪತ್ರೆಗೆ ಹೋಗಿ ವೀಣಾ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಎಸ್ ಪಿ ಯೋಗಣ್ಣ, ಅಸೌಖ್ಯಕ್ಕೀಡಾದಾಗ ರೋಗಿಗಳು ವೈದ್ಯರ ಬಳಿ ಹೋಗುವುದು ಪದ್ಧತಿ. ವೈದ್ಯರು ರೋಗಿ ಬಳಿ ಹೋಗುವುದು ವಿರಳ ಎಂದರು. ಸಂಘಟನೆ ರಾಜ್ಯಾಧ್ಯಕ್ಷ ಡಾ ಎಚ್ ಎನ್ ರವೀಂದ್ರ, ಇದು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಶಾಸಕರ ಮನೋಧರ್ಮ ತೋರಿಸುತ್ತದೆ ಎಂದಿದ್ದಾರೆ.