ರಾಜ್ಯ

ಆರ್ ಟಿಇ ಕಾಯ್ದೆಗೆ ತಿದ್ದುಪಡಿ: ಕರ್ನಾಟಕದಲ್ಲಿ ಅರ್ಜಿ ಸಲ್ಲಿಕೆ ಸಂಖ್ಯೆಯಲ್ಲಿ ಭಾರೀ ಇಳಿಕೆ!

Sumana Upadhyaya
ಬೆಂಗಳೂರು: 2019-20ನೇ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್ ಟಿಇ) ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ ಇಳಿಮುಖವಾಗಿದೆ. ಅರ್ಜಿ ಸಲ್ಲಿಕೆಗೆ ಇದೇ 25 ಕಡೆಯ ದಿನವಾಗಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಇದುವರೆಗೆ ಸುಮಾರು 17 ಸಾವಿರ ಅರ್ಜಿಗಳು ಬಂದಿವೆ.
ಕಳೆದ ವರ್ಷ ಆರ್ ಟಿಇಯಡಿ 1.2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು ಅದು ಈ ವರ್ಷ 17 ಸಾವಿರದ 336ಕ್ಕೆ ಇಳಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ, ಪೋಷಕರು ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿಗೆ ಸೇರಿಸಲು ಇಚ್ಛೆಯನ್ನು ಹೊಂದಿಲ್ಲದಿರುವುದರಿಂದ ಅರ್ಜಿ ಸಲ್ಲಿಕೆ ಹೆಚ್ಚಾಗುವ ಸಾಧ್ಯತೆಯಿಲ್ಲ. ಸರ್ಕಾರ ತಿದ್ದುಪಡಿ ತಂದಿರುವುದರಿಂದ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಪ್ರವೇಶಕ್ಕೆ ನಿರ್ಬಂಧವಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ಇದು ಆರ್ಥಿಕವಾಗಿ ಹಿಂದುಳಿದಿರುವ ಪೋಷಕರ ಬೇಸರಕ್ಕೆ ಕಾರಣವಾಗಿದೆ.
ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಅರ್ಜಿ ಸಲ್ಲಿಕೆಗೆ ಪ್ರವೇಶವಿಲ್ಲದಿರುವಾಗ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅರ್ಜಿ ಸಲ್ಲಿಸುವ ಅವಶ್ಯಕತೆಯೇನಿದೆ? ಎಂದು ಪೋಷಕರೊಬ್ಬರು ಕೇಳುತ್ತಾರೆ. ಆರ್ ಟಿಇ ವಿದ್ಯಾರ್ಥಿಗಳ ಪೋಷಕರ ಸಂಘಟನೆ ಈ ವಿಚಾರದಲ್ಲಿ ಹೈಕೋರ್ಟ್ ಮೊರೆ ಹೋಗಿದ್ದು ಅಲ್ಲಿ ವಿಚಾರಣೆ ನಡೆಯುತ್ತಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲದಿರುವ ಕಡೆ ಅರ್ಜಿ ಸಲ್ಲಿಸಬಹುದಾದ ಅನುದಾನರಹಿತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳುವ ಇಲಾಖೆ ಇದುವರೆಗೆ ಅಂತಹ ಯಾವುದೇ ಮಾಹಿತಿ ನೀಡಿಲ್ಲ. ಇದು ಮಕ್ಕಳ ಶಿಕ್ಷಣ ಕಲಿಕೆ ಹಕ್ಕನ್ನು ಸರ್ಕಾರ ಉಲ್ಲಂಘಿಸಿದಂತಾಗುತ್ತದೆ ಎಂದು ಮತ್ತೊಬ್ಬ ಪೋಷಕರು ಹೇಳುತ್ತಾರೆ.
ಇದು ಒಳ್ಳೆಯ ಬೆಳವಣಿಗೆಯಲ್ಲ ಎಂಬುದು ಶಿಕ್ಷಣ ಹಕ್ಕು ಹೋರಾಟಗಾರರ ಅಭಿಮತ. ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಆರ್ ಟಿಇ ಇರುವಿಕೆಯ ಅಗತ್ಯವೇನಿದೆ? ಕಳೆದ ಶೈಕ್ಷಣಿಕ ವರ್ಷದಲ್ಲಿ 10 ಸಾವಿರಕ್ಕೂ ಅಧಿಕ ಸೀಟುಗಳು ಭರ್ತಿಯಾಗದೆ ಉಳಿದಿದ್ದು ಅವುಗಳನ್ನು ಪರಿಶೀಲಿಸಿದಾಗ ಅವುಗಳೆಲ್ಲ ಖಾಸಗಿ ಅನುದಾನಿತ ಶಾಲೆಗಳಲ್ಲಿವೆ. ಬಹುತೇಕ ಪೋಷಕರು ಆರ್ ಟಿಇಯಡಿ ಅನುದಾನಿತ ಶಾಲೆಗಳನ್ನು ಇಷ್ಟುಪಡುವುದಿಲ್ಲ. ಈ ಸಲ ಕೂಡ ಅರ್ಜಿ ಹಾಕಿದವರಲ್ಲಿ ಬಹುತೇಕರು ಅನುದಾನರಹಿತ ಶಾಲೆಗಳಲ್ಲಿ ಪ್ರವೇಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಎನ್ನುತ್ತಾರೆ ಆರ್ ಟಿಇ ಕಾರ್ಯಕರ್ತ ನಾಗಸಿಂಹ ಜಿ ರಾವ್.
SCROLL FOR NEXT