ರಾಜ್ಯ

ಉಮಾಶ್ರೀ ವಿರುದ್ಧ ಮಾನನಷ್ಟ ಮೊಕದ್ದಮೆ: ಶಾಸಕ ಹರತಾಳ ಹಾಲಪ್ಪಗೆ ಕೋರ್ಟ್ ತರಾಟೆ

Lingaraj Badiger
ಬೆಂಗಳೂರು: ಸ್ವತಃ ದೂರುದಾರರಾಗಿದ್ದರೂ, ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದ ಸಾಗರ ಶಾಸಕ ಹರತಾಳ ಹಾಲಪ್ಪ ವಿರುದ್ಧ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್‍ ಪ್ರಕರಣಗಳ ವಿಶೇಷ ನ್ಯಾಯಾಲಯ ಕಿಡಿಕಾರಿದೆ. ಜನಪ್ರತಿನಿಧಿಗಳಾಗಿ ನೀವೇ ನ್ಯಾಯಾಲಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡಿದೆ.
ಐದು ವರ್ಷಗಳ ಹಿಂದೆ ತಮ್ಮನ್ನು 'ಅತ್ಯಾಚಾರಿ ' ಎಂದು ಕರೆದ ಮಾಜಿ ಸಚಿವೆ ಉಮಾಶ್ರೀ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ಹಾಲಪ್ಪ, ನಂತರ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿಗೆ ನೋಟಿಸ್‍ ಜಾರಿ ಮಾಡಿತ್ತು. ಶನಿವಾರ ಹಾಲಪ್ಪ ವಿಚಾರಣೆಗೆ ಬಂದಾಗ, ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ, ಐದು ವರ್ಷಗಳ ಕಾಲ ವಿಚಾರಣೆಗೆ ಏಕೆ ಹಾಜರಾಗಲಿಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ ಹಾಲಪ್ಪ, ಪ್ರಕರಣದ ವಿಚಾರಣೆಗೆ ಹೈಕೋರ್ಟ್ ನ ತಡೆಯಾಜ್ಞೆ ಇತ್ತು ಎಂದು ಸಬೂಬು ಹೇಳಿದರು.
ಇದನ್ನೊಪ್ಪದ ನ್ಯಾಯಾಧೀಶರು, ವಿಚಾರಣೆಗೆ ತಡೆ ಇದ್ದರೆ, ದೂರುದಾರರಾದ ನಿಮಗೆ ವಿಚಾರಣೆಗೆ ಹಾಜರಾಗಲೇನು ಸಮಸ್ಯೆ. ದೂರುದಾರರಿಗೆ ಕೂಡ ನೋಟಿಸ್ ‍ನೀಡಿ ಕರೆಸಿಕೊಳ್ಳಬೇಕೆ. ಜನಪ್ರತಿನಿಧಿಗಳಾದ ನೀವೇ ಹೀಗೆ ನ್ಯಾಯಾಲಯಕ್ಕೆ ಅಗೌರವ ತೋರಿದರೆ ಹೇಗೆ ಎಂದು ಪ್ರಶ್ನಿಸಿದರು. 
ಈ ಸಂದರ್ಭದಲ್ಲಿ ಆರೋಪಿ ಉಮಾಶ್ರೀ ಕೂಡ ನ್ಯಾಯಾಲಯದಲ್ಲಿ ಹಾಜರಿದ್ದರು. ಆದರೆ, ಹಾಲಪ್ಪ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.
SCROLL FOR NEXT