ಕಾರವಾರ: 2018 - 2019ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಬಿಎಸ್ಎಫ್ ಮಾಜಿ ಯೋಧನ ಪುತ್ರಿ ನಾಗಾಂಜಲಿ ಅವರು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ನಾಗಾಂಜಲಿ ಅವರು ಕುಮಟಾ ತಾಲೂಕಿನ ಕಲಬಾಗದ ಸಿವಿಎಸ್ ಕೆ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ಅವರ ತಂದೆ ಪರಮೇಶ್ವರ ನಾಯ್ಕ್ ಅವರು ಬಿಎಸ್ ಎಫ್ ಮಾಜಿ ಯೋಧರಾಗಿದ್ದಾರೆ.
ಪರಮೇಶ್ವರ ಅವರು ಬಿಎಸ್ಎಫ್ ನಲ್ಲಿ ಸೇವೆ ಸಲ್ಲಿಸಿ, 2006ರಲ್ಲಿ ನಿವೃತ್ತಿ ಪಡೆದರು. ತದನಂತರ ಕಳೆದ ಹತ್ತು ವರ್ಷಗಳಿಂದ ಸ್ವಂತ ಟೆಂಪೊವೊಂದನ್ನು ಇಟ್ಟುಕೊಂಡು, ಬಾಡಿಗೆಗೆ ಬಿಡುತ್ತಿದ್ದಾರೆ.
ಎಲ್ಲಾ ವಿಷಯಗಳಲ್ಲೂ 100ಕ್ಕೆ 100 ಅಂಕ ಪಡೆದ ನಾಗಾಂಜಲಿ ಅವರು ಇಂಡಿಯನ್ ಎಕ್ಸ್ ಪ್ರೆಸ್ ಜತೆ ತಮ್ಮ ಖುಷಿ ಹಂಚಿಕೊಂಡಿದ್ದು, ಶಾಲೆಯಲ್ಲಿ ಪದೇಪದೆ ನಡೆಸಿದ ಪೂರ್ವಭಾವಿ ಪರೀಕ್ಷೆಗಳು ನನ್ನ ವಿಶ್ವಾಸವನ್ನು ಹೆಚ್ಚಿಸಿತು. ನಾನು ನಿತ್ಯ 3 ರಿಂದ 4 ಗಂಟೆ ಮಾತ್ರ ಓದುತ್ತಿದ್ದೆ. ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ ನಂತರ ನಿತ್ಯ 6 ರಿಂದ 7 ಗಂಟೆ ಓದಲು ಆರಂಭಿಸಿದೆ ಎಂದು ಹೇಳಿದ್ದಾರೆ.
ನಾನು ಪೂರ್ವಭಾವಿ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕ ಪಡೆಯುತ್ತಿದ್ದೆ. ಒಮ್ಮೆ ಪೂರ್ವಭಾವಿ ಪರೀಕ್ಷೆಯಲ್ಲಿ ಶೇ.99ರಷ್ಟು ಅಂಕ ಪಡೆದಿದ್ದೆ. ಅಂತಮವಾಗಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಅಂಕ ಪಡೆದಿದ್ದೇನೆ ಎಂದರು.
ತಾನು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ಸಹಕರಿಸಿದ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಧನ್ಯವಾದ ಹೇಳಿದ ನಾಗಾಂಜಲಿ. ತಾನು ಮುಂದೆ ವೈದ್ಯೆಯಾಗಿ ಬಡವರ ಸೇವೆ ಮಾಡುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics