ರಾಜ್ಯ

ಜಯಂತಿ ಹೆಸರಲ್ಲಿ ಕೋಟ್ಯಂತರ ರೂ ಲೂಟಿ : ತನಿಖೆ ಆಗ್ರಹಿಸಿ ಮುಖ್ಯ ಕಾರ್ಯದರ್ಶಿಗೆ ದೂರು

Nagaraja AB

ಬೆಂಗಳೂರು: ಧಾರ್ಮಿಕ ಹಾಗೂ ಸಮಾಜ ಸುಧಾರಕರ ಜಯಂತಿ ಹೆಸರಲ್ಲಿ ಅಧಿಕಾರಿಗಳು ಕೋಟಿ‌ ಕೋಟಿ ಲೂಟಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗಣ್ಯ ವ್ಯಕ್ತಿಗಳ ಜಯಂತಿ ಆಚರಣೆಗೆ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಅಧಿಕಾರಿಗಳು  ದುರ್ಬಳಕೆ ಮಾಡಿಕೊಂಡಿದ್ದು,  ಈ ಸಂಬಂಧ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ಹಕ್ಕು ಕಾರ್ಯಕರ್ತ ಮರಿಲಿಂಗೇಗೌಡ‌ ಮಾಲಿ ಪಾಟೀಲ್ ಎಂಬವರು ದೂರು ನೀಡಿದ್ದಾರೆ.

2013ರಿಂದ 2018 ವರೆಗೆ ನಡೆದ ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಕರ  ಜಯಂತಿಗಳ ದಾಖಲೆ ಸಂಗ್ರಹಿಸಿದ್ದು, ಅದರ ಪ್ರಕಾರ ಸಿದ್ದರಾಮಯ್ಯ ಸರ್ಕಾರದ ವೇಳೆ ಜಯಂತಿಗಳ ಹೆಸರಲ್ಲಿ ಒಟ್ಟು 17.65 ಕೋಟಿ ರೂ. ಖರ್ಚಾಗಿರುವುದು ಬಯಲಾಗಿದೆ.

ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಜಯಂತಿ ಆಚರಣೆ ಮಾಡಲಾಗಿದೆ ಎಂದು ದಾಖಲೆಗಳಲ್ಲಿ ಅಂಕಿ ಅಂಶಗಳಿವೆ. ಆದರೆ ನಿಜವಾಗಿಯೂ ಈ ಜಯಂತಿ ಆಚರಣೆಗಳು ನಡೆದಿರುವ ಬಗ್ಗೆ ಅನುಮಾನ ಮೂಡಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಆರೋಪಿಸಿದ್ದಾರೆ.

ಬಸವ ಜಯಂತಿ, ಕನಕ ಜಯಂತಿ, ಟಿಪ್ಪು ಜಯಂತಿ ಸೇರಿ ಅನೇಕ ಗಣ್ಯ ವ್ಯಕ್ತಿಗಳ ಜಯಂತಿಯನ್ನು ಜಿಲ್ಲಾ‌ ಮಟ್ಟದಲ್ಲಿ‌ ಆಚರಿಸಿದ್ದೇವೆ ಎಂದು ಹೇಳಿ ಅಧಿಕಾರಿಗಳು 2013-2018ರವರೆಗೆ ಒಟ್ಟಾರೆ 17.65 ಕೋಟಿ ರೂ.ವನ್ನು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯಿಂದ ಬಿಡುಗಡೆ ಮಾಡಿಸಿಕೊಂಡಿದ್ದಾರೆ.
ಇನ್ನೂ ವಿಚಿತ್ರವೆಂದರೆ ಅನೇಕ ಗಣ್ಯರ ಹೆಸರಲ್ಲಿ ಜಯಂತಿ ಆಚರಿಸದೆ ಅಧಿಕಾರಿಗಳು ಹಣ ಖರ್ಚು ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಆರೋಪಿಸಿದ್ದಾರೆ.
ಯಾವ ಜಯಂತಿಗೆ ಎಷ್ಟು ಖರ್ಚಾಗಿದೆ
ಮೇಲೆ ಉಲ್ಲೇಖಿಸಿದ ಗಣ್ಯರ ಜಯಂತಿಗಳ ಆಚರಣೆಗೆ ಪ್ರಮುಖ ಸಮುದಾಯದ ಸಂಘಟನೆಗಳಿಗೆ ಹಣ ನೀಡಿ ಉಳಿದ ಹಣವನ್ನು ಅಧಿಕಾರಿಗಳು ಹಾಗೂ ಕೆಲವರು ಮುಖಂಡರು ಸೇರಿ ಗುಳುಂ ಮಾಡಿದ್ದಾರೆಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ಗಣ್ಯರ ಹೆಸರಿನಲ್ಲಿ ಹಣ ದುರುಪಯೋಗಕ್ಕೆ ಕಡಿವಾಣ ಹಾಕುವಂತೆ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.
SCROLL FOR NEXT