ಚಿಕ್ಕಮಗಳೂರು: ಕಾಫಿ ಕಿಂಗ್ ಸಿದ್ದಾರ್ಥ ಅವರ ಕೆಫೆ ಕಾಫಿ ಡೇಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಕೀರ್ತಿ ವಿಶ್ವ ಭೂಪಟದಲ್ಲಿ ಗುರುತಿಸುವಂತಾಯಿತು. ಹಲವು ದೇಶಗಳಲ್ಲಿ ಕಾಫಿ ಡೇ ಔಟ್ ಲೆಟ್ ತೆರೆದು ಆ ಮೂಲಕ ಚಿಕ್ಕಮಗಳೂರು ಕಾಫಿಯ ಘಮವನ್ನು ಎಲ್ಲೆಡೆ ಪಸರಿಸಿದರು.
ಕಾರ್ಮಿಕರು ಮತ್ತು ಮ್ಯಾನೇಜ್ ಮೆಂಟ್ ನಡುವೆ ಬಹುತೇಕ ಎಲ್ಲಾ ಕಡೆ ತಿಕ್ಕಾಟಗಳು ಉಂಟಾಗುವುದು ಸರ್ವೇ ಸಾಮಾನ್ಯ, ಆದರೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ತಮ್ಮ ಸಿಬ್ಬಂದಿ ಜೊತೆ ಅನ್ಯೋನ್ಯ ಸಂಬಂಧ ಇರಿಸಿಕೊಂಡಿದ್ದರು, ಕಾರ್ಮಿಕರ ಯೂನಿಯನ್ ನಾಯಕ ಸಾವನ್ನಪ್ಪಿದಾಗ ಅವರ ಕುಟುಂಬಕ್ಕೆ ಎಲ್ಲಾ ರೀತಿಯಲ್ಲಿಯೂ ಸಹಾಯ ಮಾಡಿದ್ದರು.
1990 ರಲ್ಲಿ ಚಿಕ್ಕಮಗಳೂರಿನಲ್ಲಿ ಕಾರ್ಮಿಕರ ಒಕ್ಕೂಟ ಪ್ರಭಾವ ಶಾಲಿಯಾಗಿತ್ತು, ಕಾರ್ಮಿಕರ ಹಕ್ಕುಗಳ ಹೋರಾಟಗಾರ ಬಿ.ಕೆ ಸುಂದರೇಶ್, ಕಾಫಿ ಬೆಳೆಗಾರರ ಹಿತ ಕಾಪಾಡಲು ಬದ್ಧರಾಗಿದ್ದರು, ಇದೇ ವೇಳೆ ಸಿದ್ದಾರ್ಥ್ ತಮ್ಮ ಸಾವಿಕರಾರು ಎಕರೆ ಕಾಫಿ ಎಸ್ಟೇಟ್ ಅನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದ್ದರು. ಆದರೆ ಕಾರ್ಮಿಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.
ಸುಂದರೇಶ್ ಕಡಿಮೆ ಮತಗಳ ಅಂತರದಿಂದ ಸೋತಾಗ ನೋವಿನಲ್ಲಿದ್ದರು, ಆ ವೇಳೆ ಸಿದ್ದಾರ್ಥ್ ಅವರನ್ನು ಸಮಾಧಾನ ಪಡಿಸಿದ್ದರು, ನಂತರ ರೈಲ್ವೆ ಅಪಘಾತದಲ್ಲಿ ಸುಂದರೇಶ್ ಸಾವನ್ನಪ್ಪಿದ್ದಾಗ ಅವರ ಕುಟುಂಬಕ್ಕೆ ಸಿದ್ದಾರ್ಥ್ ಸಹಾಯ ಮಾಡಿದ್ದರು. ಅವರ ಮಗಳ ವಿದ್ಯಾಭ್ಯಾಸದ ಹೊಣೆ ಹೊತ್ತುಕೊಂಡಿದ್ದರು ಆಕೆಗೆ ಎಂಜಿನೀಯರಿಂಗ್ ಓದಿಸಿದ್ದಾರೆ.
ಕಡೂರು-ಮಂಗಳೂರು ರಸ್ತೆಯ ಹೊರಭಾಗದಲ್ಲಿ ಬೀನ್ ಕಾಫಿ ಟ್ರೇಡಿಂಗ್ ಕಂಪನಿ ಸ್ಥಾಪಿಸಿದ್ದ ಸಿದ್ದಾರ್ಥ ಹೆಗಡೆ ಅದರ ಮೂಲಕ ಪ್ರಪಂಚಕ್ಕೆ ಬ್ರ್ಯಾಂಡೆಡ್ ಕಾಫಿ ಪರಿಚಯಿಸಿದ್ದರು. ಇದರಿದಂಗಾಗಿ ಜಗತ್ತಿನ ಭೂಪಟದಲ್ಲಿ ಚಿಕ್ಕಮಗಳೂರಿಗೆ ಸ್ಥಾನ ಕೂಡ ಸಿಕ್ಕಿತ್ತು.
ಪ್ರತಿ ವರ್ಷ ನಡೆಯುವ ತೋಟದ ಹಬ್ಬದಲ್ಲಿ ಪಾಲ್ಗೋಳ್ಳುತ್ತಿದ್ದ ಸಿದ್ದಾರ್ಥ್ ಎಲ್ಲರಲ್ಲಿ ಒಬ್ಬರಾಗಿರುತ್ತಿದ್ದರು. ತಾವು ಕೂಡ ಕೆಲಸಗಾರರ ಜೊತೆ ಸೇರಿ ಊಟ ಮಾಡುತ್ತಿದ್ದರು ಎಂದು ಸ್ಥಳೀಯರು ಸ್ಮರಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos