ರಾಜ್ಯ

ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಕಮಲ್ ಪಂಥ್ ಗುಪ್ತಚರ ವಿಭಾಗದ ಎಡಿಜಿಪಿ

Nagaraja AB
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಬದಲಾವಣೆ ಮಾಡಲಾಗಿದ್ದು, ಒಟ್ಟು 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಮಾನವ ಹಕ್ಕು ಆಯೋಗದ ಎಡಿಜಿಪಿಯಾಗಿದ್ದ ಅಮರ್ ಕುಮಾರ್ ಪಾಂಡೆ ಅವರನ್ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ನೇಮಿಸಲಾಗಿದೆ. ಇದೇ ವಿಭಾಗದ ಎಡಿಜಿಪಿಯಾಗಿದ್ದ ಕಮಲ್ ಪಂಥ್ ಅವರನ್ನು ಗುಪ್ತಚರ ವಿಭಾಗದ ಎಡಿಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಡಾ. ಎ. ಸುಬ್ರಮಣೇಶ್ವರ ರಾವ್ ಅವರನ್ನು ಮಂಗಳೂರಿನ ಪೊಲೀಸ್ ಕಮೀಷನರ್ ಆಗಿ ವರ್ಗಾವಣೆ ಮಾಡಲಾಗಿದ್ದು, ಅಲ್ಲಿನ ಹಾಲಿ ಕಮೀಷನರ್ ಸಂದೀಪ್ ಪಾಟೀಲ್ ಅವರನ್ನು ಬೆಂಗಳೂರಿನ ಅಪರಾಧ ವಿಭಾಗದ ಜಂಟಿ ಕಮೀಷನರ್ ಆಗಿ ವರ್ಗಾಯಿಸಲಾಗಿದೆ. 
ಐಜಿಪಿ ಎಂ ಚಂದ್ರಶೇಖರ್  ಅವರನ್ನು ಎಸಿಬಿಯ ಮುಖ್ಯಸ್ಥರನ್ನಾಗಿ ವಾಪಾಸ್ ಕರೆಸಿಕೊಳ್ಳಲಾಗಿದೆ.  ಡಾ. ಚೇತನ್ ಸಿಂಗ್ ರಾಥೋರ್ ಅವರನ್ನು ಬೆಂಗಳೂರು ಸೆಂಟ್ರಲ್ ವಿಭಾಗದ ಡಿಸಿಪಿಯನ್ನಾಗಿ ವರ್ಗಾಯಿಸಲಾಗಿದೆ. ಆದರೆ, ಅಲ್ಲಿನ ಹಾಲಿ ಡಿಸಿಪಿ ಡಾ. ದೇವರಾಜ್ ಅವರನ್ನು ಯಾವುದೇ ಹುದ್ದೆ ನಿಯೋಜಿಸದೆ ವರ್ಗಾವಣೆ ಮಾಡಲಾಗಿದೆ.
ಡಾ. ಅನೂಪ್ ಶೆಟ್ಟಿ ಎಸ್ ಪಿ- ರಾಮನಗರ, ಕೆಎಂ ಶಾಂತರಾಜು ಎಸ್ಪಿ- ಶಿವಮೊಗ್ಗ ಮತ್ತು ಹನುಮಂತರಾಯಪ್ಪ ಅವರನ್ನು ದಾವಣಗೆರೆ ಎಸ್ಪಿಯಾಗಿ ವರ್ಗಾಯಿಸಿ ಸರ್ಕಾರ ಆದೇಶಿಸಿದೆ.
SCROLL FOR NEXT