ರಾಜ್ಯ

ಪೊಲೀಸರ ಕೈಗೆ ವಿಜಿ ಸಿದ್ದಾರ್ಥ್ ಸಾವಿನ ಪ್ರಾಥಮಿಕ ವರದಿ: ಅದರಲ್ಲೇನಿದೆ?

Sumana Upadhyaya
ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಉದ್ಯಮಿ  ಸಿದ್ದಾರ್ಥ್‌ ಸಾವಿನ ಪ್ರಾಥಮಿಕ ವರದಿ ಬಂದಿದ್ದು, ಅವರು ಮಂಗಳೂರು ಬಳಿಯ ನೇತ್ರಾವತಿ ನದಿ ನೀರಿನಲ್ಲಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಹೇಳಿದೆ ಎಂದು ತಿಳಿದುಬಂದಿದೆ. 
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್  ವಿ ಜಿ ಸಿದ್ದಾರ್ಥ್ ಅವರ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ತನಿಖಾಧಿಕಾರಿಗೆ ಸಲ್ಲಿಸಿದ್ದಾರೆ, ಆದರೆ ವರದಿ ಬಗ್ಗೆ ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ. ಸಿದ್ದಾರ್ಥ್ ಸಾವಿನ ಹಿಂದೆ ಕೊಲೆ ಅಥವಾ ಇನ್ನಾವುದೇ ರೀತಿಯ ಸಂಚು ಕೆಲಸ ಮಾಡಿದೆ ಎಂಬ ಊಹಾಪೋಹಗಳನ್ನು ವರದಿಯ ಸಾರ ತಳ್ಳಿಹಾಕಿದೆ ಎಂದು ತಿಳಿದುಬಂದಿದೆ. 
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ವೈದ್ಯಕೀಯ ಅಧೀಕ್ಷಕಿ ಡಾ ರಾಜೇಶ್ವರಿ ದೇವಿ, ತಾವು ಸಿದ್ದಾರ್ಥ್ ಅವರ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ತನಿಖಾಧಿಕಾರಿ ಕೋದಂಡರಾಮ ಅವರಿಗೆ ಸಲ್ಲಿಸಿದ್ದೇನೆ. ವರದಿಯಲ್ಲಿ ಏನು ವಿಷಯವಿದೆ ಎಂಬ ಬಗ್ಗೆ ನಾನು ವಿವರ ನೀಡಲು ಸಾಧ್ಯವಿಲ್ಲ. ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ರೀತಿನೀತಿಗಳ ಪ್ರಕಾರ ನಾವು ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸುವಂತಿಲ್ಲ ಎಂದರು.
ಹಿರಿಯ ಪೊಲೀಸ್ ಅಧಿಕಾರಿ ಕೂಡ ವರದಿ ಕುರಿತಂತೆ ವಿವರ ನೀಡಲು ನಿರಾಕರಿಸಿದರು. ನೀರಿನಲ್ಲಿ ಮುಳುಗಿ ಸಿದ್ದಾರ್ಥ್ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ ಎಂದು ಹೇಳಲಾಗುತ್ತಿದ್ದು ಈ ಬಗ್ಗೆ ಅಧಿಕೃತ ಖಚಿತತೆ ಇನ್ನೂ ತಿಳಿದುಬಂದಿಲ್ಲ. ಮಂಗಳೂರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ಡಿಸಿಪಿ, ಕೇಸಿನ ಬಗ್ಗೆ ಇನ್ನೂ ತನಿಖೆ ನಡೆಸಬೇಕಾಗಿರುವುದರಿಂದ ಸದ್ಯಕ್ಕೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಸರಿಯಾದ ಸಮಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದರು.
SCROLL FOR NEXT