ರಾಜ್ಯ

ಸಚಿವ ಸಂಪುಟ ರಚನೆ ನಂತರ ಸಿಎಂ ಯಡಿಯೂರಪ್ಪ ಅವರ ಮುಂದಿನ ಗಮನ ಬಜೆಟ್ ಮಂಡನೆ

Sumana Upadhyaya
ಮೈಸೂರು: ಸದ್ಯದಲ್ಲಿಯೇ ಸಚಿವ ಸಂಪುಟ ರಚನೆ ಮಾಡಿದ ನಂತರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮುಂದಿನ ಕೆಲಸ ಬಿಜೆಪಿ ಸರ್ಕಾರದ ನೂತನ ಬಜೆಟ್ ಮಂಡಿಸುವುದು.
ಸದ್ಯಕ್ಕೆ ಮುಂದಿನ ಅಕ್ಟೋಬರ್ 31ರವರೆಗೆ ಮಧ್ಯಂತರ ಬಜೆಟ್ ಮಂಡಿಸುವ ಯೋಜನೆಯಲ್ಲಿ ಯಡಿಯೂರಪ್ಪನವರು ಇದ್ದರೂ ಕೂಡ ಸೆಪ್ಟೆಂಬರ್ ವೇಳೆಗೆ ಕೃಷಿ ವಲಯಕ್ಕೆ ಪೂರಕವಾದ ಪೂರ್ಣ ಪ್ರಮಾಣದ ಬಜೆಟ್ ನ್ನು ಸಿಎಂ ಮಂಡಿಸಲಿದ್ದಾರೆ ಎಂದು ಮೂಲಗಳು ಹೇಳುತ್ತವೆ.
ಸದ್ಯ ಯಡಿಯೂರಪ್ಪನವರಿಗೆ ಬಜೆಟ್ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ. ಸಚಿವ ಸಂಪುಟ ರಚನೆ, ಅನರ್ಹ ಶಾಸಕರ ವಿಚಾರ ಮೊದಲಾದ ವಿಷಯಗಳಿವೆ. ಅದರ ಬಳಿಕವಷ್ಟೇ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮತ್ತು ಸರ್ಕಾರಕ್ಕೆ ಹಣಕಾಸು ಸಲಹೆಗಾರರ ನೇಮಕ ಕುರಿತು ಯಡಿಯೂರಪ್ಪನವರು ಗಮನ ಹರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ನಾಲ್ಕು ದಶಕಗಳ ರಾಜಕೀಯ ವೃತ್ತಿಯಲ್ಲಿ ಪ್ರಬಲ ಲಿಂಗಾಯತ ಮುಖಂಡ ಯಡಿಯೂರಪ್ಪನವರು ರೈತರ ಬೆನ್ನೆಲುಬಾಗಿ ನಿಂತು ತಮ್ಮ ಹೋರಾಟ ನಡೆಸಿಕೊಂಡು ಬಂದವರು. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ಇತಿಹಾಸ ನಿರ್ಮಿಸಿದ್ದರು. ಬಿಜೆಪಿ ರೈತಪರವಾಗಿದೆ ಎಂದು ತೋರಿಸಿಕೊಳ್ಳುವ ರೀತಿಯಲ್ಲಿ ಅವರು ಈ ಬಾರಿ ಕೂಡ ಬಜೆಟ್ ಮಂಡಿಸಲಿದ್ದಾರೆ.
ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಯಡಿಯೂರಪ್ಪನವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಬಡ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 4 ಸಾವಿರ ರೂಪಾಯಿ ನೀಡುವ ಯೋಜನೆ ಪ್ರಕಟಿಸಿದರು. ನೇಯ್ಗೆಗಾರರ ಸುಮಾರು 100 ಕೋಟಿ ರೂಪಾಯಿ ಸಾಲ ಮತ್ತು ಮೀನುಗಾರರಿಗೆ ಸುಮಾರು 60 ಕೋಟಿ ರೂಪಾಯಿ ಸಾಲಮನ್ನಾ ಮಾಡಿಸಿದರು.
ಮುಂದಿನ ಕೆಲ ವಾರಗಳಲ್ಲಿ ಬಜೆಟ್ ಮಂಡನೆಗೆ ಸಿದ್ದತೆ ನಡೆಯಲಿದ್ದು ಉಪ ಚುನಾವಣೆ ನಡೆಯಲಿರುವ 17 ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ನೂತನ ಸರ್ಕಾರ ಬಜೆಟ್ ಮಂಡಿಸುವ ಅಧಿಕಾರ ಹೊಂದಿರುತ್ತದೆ. ಸದ್ಯ ಹೊಸ ಬಜೆಟ್ ಮಂಡಿಸುವ ಬಗ್ಗೆ ಯಡಿಯೂರಪ್ಪನವರು ಚರ್ಚೆ ನಡೆಸಿಲ್ಲ ಎಂದರು.
ಹೊಸ ಸರ್ಕಾರದಲ್ಲಿ ಮುಖ್ಯಮಂತ್ರಿಗಳಿಗೆ ನೂತನ ಬಜೆಟ್ ಮಂಡಿಸುವ ಅಧಿಕಾರ ಇದ್ದರೂ ಕೂಡ ಹಣಕಾಸು ವರ್ಷದ ಮಧ್ಯಭಾಗದಲ್ಲಿ ನೂತನ ಬಜೆಟ್ ಮಂಡಿಸಿದರೆ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗುತ್ತದೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಸಿ ಕೆ ರೇಣುಕಾರ್ಯ ಹೇಳುತ್ತಾರೆ.
SCROLL FOR NEXT