ರಾಜ್ಯ

ಬಾಗಲಕೋಟೆ: ಕೃಷ್ಣಾ ನದಿ ತೀರದಲ್ಲಿ ಹೈ ಅಲರ್ಟ್, ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

Nagaraja AB
ಬಾಗಲಕೋಟೆ: ಪಶ್ಚಿಮ ಘಟ್ಟ ಹಾಗೂ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜಮಖಂಡಿಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸುಮಾರು 1 ಸಾವಿರ ಕುಟುಂಬಗಳು ಪ್ರವಾಹ ಹೊಡೆತಕ್ಕೆ ಸಿಲುಕಿದ್ದು, ರಕ್ಷಣಾ ತಂಡಗಳು ಸುರಕ್ಷಿತ ಪ್ರದೇಶಗಳಿಗೆ  ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿವೆ.
 25  ಕುಟುಂಬಗಳನ್ನು ಈ ಪ್ರದೇಶದಿಂದ ಸ್ಥಳಾಂತರ ಮಾಡಲಾಗಿದೆ.  ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲಾಡಳಿತದಿಂದ ಹೈ ಆಲರ್ಟ್ ಘೋಷಣೆ ಮಾಡಲಾಗಿದೆ. 
 ಆದಾಗ್ಯೂ, ವಿಜಯಪುರದಲ್ಲಿ ಯಾವುದೇ ರೀತಿಯ ದೊಡ್ಡ ಮಟ್ಟದ ಹಾನಿಯಾಗಿಲ್ಲ, ಜಮಖಂಡಿ ತಾಲೂಕಿನ  ಸುರ್ಪಾಲಿ, ತುಬಾಚಿ, ಮುತ್ತೂರು, ಹಾಗೂ ಮುದೋಳ್ ತಾಲೂಕಿನ ಕಂಕವಾಡಿ, ನಂದಾಗಾವ್ ಗ್ರಾಮಗಳಲ್ಲಿ ಹೆಚ್ಚಿನ ರೀತಿಯ ಹಾನಿಯಾಗಿದೆ. 
ಮುತ್ತೂರು ಪ್ರವಾಹದಿಂದಾಗಿ ದ್ವೀಪದಂತಾಗಿದ್ದು, ಗ್ರಾಮಸ್ಥರು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ದೋಣಿಗಳನ್ನು ಬಳಸುತ್ತಿದ್ದಾರೆ. ಜಿಲ್ಲಾಡಳದಿಂದ 15 ಕ್ಕೂ ಹೆಚ್ಚು ಕುಟುಂಬಗಳನ್ನು ರಕ್ಷಿಸಲಾಗಿದ್ದು, ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
 ಉಳಿದ ಕುಟುಂಬಗಳ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಈ ಗ್ರಾಮದಲ್ಲಿ ಮೂರು ದಿನಗಳ ಕಾಲ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 
ಜಿಲ್ಲಾಧಿಕಾರಿ ಆರ್ . ರಾಮಚಂದ್ರನ್ ಆದೇಶದ ಮೇರೆಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಜನರಿಗೆ ನೆರವು ನೀಡಲು 20 ದೋಣಿಗಳು, 50 ಈಜು ತಜ್ಞರು, ಹಾವು ತಜ್ಞರು, ಸೇರಿದಂತೆ ಇನ್ನಿತ್ತರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
 ಪರಿಸ್ಥಿತಿ ನಿರ್ವಹಣೆಗಾಗಿ ಜಿಲ್ಲಾಡಳಿತದಿಂದ 20 ಕ್ಕೂ ಹೆಚ್ಚು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಮಖಂಡಿ ಉಪ ಆಯುಕ್ತ ಮೊಹಮ್ಮದ್ ಇಕ್ರಾಮ್ ತಿಳಿಸಿದ್ದಾರೆ.
SCROLL FOR NEXT