ಬೆಂಗಳೂರು: ಸುಷ್ಮಾ ಸ್ವರಾಜ್ ಇವತ್ತು ನಮ್ಮೊಂದಿಗೆ ಇಲ್ಲ. ಅವರ ಅಗಲಿಕೆ ನಮ್ಮನ್ನ ಅನಾಥರನ್ನಾಗಿಸಿದೆ. ಇಷ್ಟು ಬೇಗ ಸುಷ್ಮಾ ಅವರು ನಮ್ಮನ್ನ ಅಗಲಿ ಹೋಗುತ್ತಾರೆ ಎಂದು ಊಹಿಸಿರಲಿಲ್ಲ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ವಿಷಾದ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಗೂ ಸುಷ್ಮಾ ಅವರಿಗೂ ಅವಿನಾಭಾವ ಸಂಬಂಧವಿದೆ. ನಮ್ಮನ್ನು ಅವರು ತಮ್ಮ ಮಕ್ಕಳಂತೆ ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು. ನಾವು ಇವತ್ತು ತಾಯಿಯನ್ನು ಕಳೆದುಕೊಂಡ ಮಕ್ಕಳಾಗಿದ್ದೇವೆ.
ಗೌರಿ ಹಬ್ಬ, ವರಮಹಾಲಕ್ಷ್ಮೀ ಹಬ್ಬ ಬಂತು ಎಂದರೆ ಬಳ್ಳಾರಿಯಲ್ಲಿ ಸಡಗರ ಶುರುವಾಗುತ್ತಿತ್ತು. ಇಡೀ ಬಳ್ಳಾರಿಯ ಜನ ಅವರನ್ನ ಅಮ್ಮಾ ಎಂದೇ ಕರೆಯುತ್ತಿದ್ದರು. ಅವರಿಗೂ ಬಳ್ಳಾರಿ ನೆಲದ ಮೇಲೆ ಅಗಾಧ ಪ್ರೀತಿ ಇತ್ತು. ಬಳ್ಳಾರಿಯಲ್ಲಿ ಎಷ್ಟೋ ಬಾರಿ ಅವರು ಕನ್ನಡದಲ್ಲಿ ಭಾಷಣ ಮಾಡಿದ್ದೂ ಇದೆ. ಇವತ್ತು ನಮ್ಮ ಮನೆ ಅಮ್ಮನಿಲ್ಲದ ಮನೆಯಂತಾಗಿದೆ ಎಂದು ಬೇಸರಪಟ್ಟರು.
ನಾವು ರಾಜಕಾರಣಿಗಳ ಮಕ್ಕಳಲ್ಲ. ನಾವು ರಾಜಕೀಯ ಪ್ರವೇಶಕ್ಕೆ ಸುಷ್ಮಾ ಸ್ವರಾಜ್ ಅವರೇ ಕಾರಣ. ನಮ್ಮ ಸೇವೆ ಸಮಾಜಕ್ಕೆ ಬಹಳ ಇದೆ ಎಂದು ಅರಿವು ಮೂಡಿಸಿ ರಾಜಕಾರಣಕ್ಕೆ ತಂದವರೇ ಅವರು. ಹಾಗಾಗಿ ಸಾಮಾನ್ಯ ಕುಟುಂಬದಲ್ಲಿ ಬೆಳೆದ ನಾವು ಇವತ್ತು ಅವರ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆದೆವು. ಅವರ ಪ್ರೀತಿ, ವಾತ್ಸಲ್ಯವನ್ನು ಉಸಿರು ಇರುವ ತನಕ ಮರೆಯುವ ಹಾಗಿಲ್ಲ.
ಬಳ್ಳಾರಿಯಿಂದ ಲೋಕಸಭೆ ಅಭ್ಯರ್ಥಿಯಾಗಿ ಕೂಡ ಹಿಂದೆ ಸ್ಪರ್ಧೆ ಮಾಡಿದ್ದರು ಎಂದರು.
ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟ, ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡಿಗರು ಸಿಲುಕಿಕೊಂಡಾಗ ಕನ್ನಡಿಗರಂತೆಯೆ ಮಿಡಿದ ತಾಯಿ ಸುಷ್ಮಾ ಸ್ವರಾಜ್. ಪಾಕಿಸ್ತಾನದ ಅಧ್ಯಕ್ಷರಾಗಿದ್ದಾಗ ಮುಷರಫ್ ರನ್ನು ಕೂಡ ತಣ್ಣಗಾಗಿಸಿದ್ದ ಗಟ್ಟಿಗಿತ್ತಿ ನಮ್ಮ ಸುಷ್ಮಾ ಸ್ವರಾಜ್ ಎಂದು ಹಳೆಯ ನೆನಪುಗಳನ್ನು ಸ್ಮರಿಸಿದರು.
ಇಂದಿರಾಗಾಂಧಿ ನಂತರ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಅವರು ಹಿಂದೂ-ಮುಸ್ಲಿಂ ನಡುವೆ ಭಾವೈಕ್ಯತೆ ಸಾರುತ್ತಿದ್ದರು. ವಿದೇಶಾಂಗ ಸಚಿವೆಯಾಗಿದ್ದಾಗ ಭಯೋತ್ಪಾದನೆಯ ವಿರುದ್ಧ ಸಮರ ಸಾರಿದ್ದ ಅವರಿಗೆ ಇಡೀ ವಿಶ್ವವೇ ಬೆಂಬಲವಾಗಿ ನಿಂತಿತ್ತು. ವಿಶ್ವಸಂಸ್ಥೆಯಲ್ಲಿ ಕೂಡ ಅವರು ಭಯೋತ್ಪಾದನೆ ವಿರುದ್ಧ ಗುಡುಗಿದ್ದರು. ಅವರ ವಾತ್ಸಲ್ಯದ ಹೃದಯದಿಂದಲೇ ಸೂಪರ್ ಮಾಮ್ ಆಫ್ ಇಂಡಿಯಾ ಎಂಬ ಬಿರುದು ಪಡೆದಿದ್ದರು ಎಂದು ಶ್ಲಾಘಿಸಿದ್ದಾರೆ.
ಅವರನ್ನು ಕಳೆದುಕೊಂಡ ನಾವು ಇವತ್ತು ಅನಾಥ ಮಕ್ಕಳಂತೆ ಆಗಿದ್ದೇವೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಖಃ ಬರಿಸುವ ಶಕ್ತಿ ನೀಡಲಿ. ಅವರನ್ನ ಕಳೆದುಕೊಂಡ ನಾವು ಇಂದು ತಬ್ಬಲಿಗಳಾಗಿದ್ದೇವೆ. ನಮ್ಮ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಅಮ್ಮ ಮತ್ತೆ ಹುಟ್ಟಿ ಬರಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos