ರಾಜ್ಯ

'ಪೊಲೀಸ್ ಠಾಣೆ ದೇವಸ್ಥಾನವಿದ್ದಂತೆ: ನೀವು ಶುದ್ಧವಾಗಿರಿ ಠಾಣೆಯನ್ನೂ ಸ್ವಚ್ಚವಾಗಿಡಿ'

Shilpa D
ಬೆಂಗಳೂರು: ಆಗಸ್ಟ್ 2 ರಂದು ಬೆಂಗಳೂರು ನಗರ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಕಮಿಷನರ್ ಭಾಸ್ಕರ್ ರಾವ್ ಮೊದಲ ಬಾರಿಗೆ ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ವೃತ್ತಿಯ ಘನತೆ ಹೆಚ್ಚಿಸುವುದರ ಜೊತೆಗೆ,ಪ್ರಾಮಾಣಿಕತೆ, ಜವಾಬ್ದಾರಿಯುತವಾಗಿ ಶುದ್ದ ಹಸ್ತದಿಂದಿರಿ ಎಂದು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. 
ಪೊಲೀಸರ ಸಂಸ್ಕೃತಿ ಬದಲಾಗಬೇಕು, ಜನರ ಸುರಕ್ಷತೆ ಜೊತೆಗೆ ಪೇದೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ಸೂಚನೆ ನೀಡಿದ್ದಾರೆ, ಹಲ್ಲೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಆತಂಕ ವ್ಯಕ್ತ ಪಡಿಸಿದ್ದಾರೆ, ನಗರದ ಜನತೆಯ ಸುರಕ್ಷತೆಗಾಗಿ ತಾವು ಶ್ರಮಿಸುವ ಸಲುವಾಗಿ ಆರೋಗ್ಯಯುತ ಪೊಲೀಸ್ ಪಡೆ ರೂಪಿಸಬೇಕು ಎಂದು ಹೇಳಿದ್ದಾರೆ.
ಇದಕ್ಕಾಗಿ ಪೊಲೀಸ್ ಪೇದೆಗಳ ಆರೋಗ್ಯ ಬಹಳ ಮುಖ್ಯವಾಗಿದೆ, ಅವರಿಗೆ ವಾರದ ರಜೆ ನೀಡುವುದರ ಮೂಲಕ ಆರೋಗ್ಯಯುತ, ಸ್ವಚ್ಛ ಪರಿಸರ ನಿರ್ಮಾಣ ಮಾಡಿ, ಪೊಲೀಸ್ ಠಾಣೆಯನ್ನು ಹಾಗೂ ಶೌಚಾಲಯಗಳನ್ನು ಸ್ವಚ್ಛವಾಗಿಡಿ, ಠಾಣೆಗಳ ಮುಂಭಾಗ ತ್ಯಾಜ್ಯ ಹಾಗೂ ಸೀಜ್ ಮಾಡಿರುವ ವಾಹನಗಳನ್ನು ನಿಲ್ಲಿಸಬೇಡಿ ಎಂದು ಸೂಚಿಸಿದ್ದಾರೆ, 
ಪೊಲೀಸ್ ಠಾಣೆ ದೇವಸ್ಥಾನವಿದ್ದಂತೆ, ಇಲ್ಲಿಗೆ ಬರುವ ಪ್ರತಿಯೊಬ್ಬರು ಬಹಳ ಮುಖ್ಯ, ತಮ್ಮ ಠಾಣೆಯ ಕ್ಷೇತ್ರ ವ್ಯಾಪ್ತಿಗೆ  ಇನ್ಸ್ ಪೆಕ್ಟರ್ ಅವರೇ ಕಮಿಷನರ್ ಆಗಿರುತ್ತಾರೆ, ಎಂದು ಹೇಳಿರುವ ಅವರು, ನಿರ್ಲಕ್ಷ್ಯ ಮತ್ತು ಅಶಿಸ್ತನ್ನು ತಾವು ಸಹಿಸುವುದಿಲ್ಲ ಎಂದು ನಗರ ಅಪರಾಧ ವಿಭಾಗಕ್ಕೆ ಎಚ್ಚರಿಕೆ ನೀಡಿದ್ದಾರೆ.
ಡ್ರಗ್ ಮಾಫಿಯಾ ನಿಯಂತ್ರಣ ಮತ್ತು ರೌಡಿಗಳ ಎಡೆ ಮುರಿಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕು, ಪ್ರಕರಣಗಳನ್ನು ದಾಖಲಿಸಿಕೊಂಡ ನಂತರ ನಿಗದಿತ ಸಮಯದಲ್ಲೇ ತನಿಖೆಗಳು ಮುಗಿಯಬೇಕು ಎಂದು ಆದೇಶಿಸಿದ್ದಾರೆ.
SCROLL FOR NEXT