ಇತ್ತೀಚೆಗೆ ವಿಧಾನಸೌಧದ ಸರ್ಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಬೆಂಗಳೂರು: ರಾಜ್ಯ ಸರ್ಕಾರ ಸದ್ಯದಲ್ಲಿಯೇ ದೆಹಲಿ ಸರ್ಕಾರದ ನಿಯಮ ಪಾಲಿಸಲಿದೆ. ಇನ್ನು ಮುಂದೆ ಕಚೇರಿಗೆ ತಡವಾಗಿ ಬರುವ ನೌಕರರಿಗೆ ದಂಡ ವಿಧಿಸಲಾಗುತ್ತದೆ. ನೌಕರರು ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗಬೇಕು ಎಂದು ಕಡ್ಡಾಯ ಮಾಡಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ) ಆಯುಕ್ತ ಜಿ ಕೆ ಪ್ರಕಾಶ್ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ತೆಗೆದುಕೊಂಡಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ಮರುದಿನವೇ ಬಿಡಿಎ ಕೇಂದ್ರ ಕಚೇರಿಗೆ ಆಗಮಿಸಿ ನೌಕರರೆಲ್ಲ ಬಂದಿದ್ದಾರೆಯೇ ಎಂದು ತಪಾಸಣೆ ಮಾಡಿದರು. ಎಂಜಿನಿಯರ್ ಮತ್ತು ಕಾರ್ಯದರ್ಶಿಗಳು ಬೆಳಗ್ಗೆ 10.30ಕ್ಕೆ ಆಗಮಿಸಿದ್ದರೆ ಕಚೇರಿಯ ಇತರ ಸಿಬ್ಬಂದಿ ಅಲ್ಲಿ ಉಪಸ್ಥಿತರಿರಲಿಲ್ಲ.
ಇದಕ್ಕೆ ಶಿಸ್ತುಕ್ರಮಕ್ಕೆ ಮುಂದಾದ ಅವರು ಸಿಬ್ಬಂದಿ ಕಚೇರಿಗೆ ಬರುವಾಗ ಮತ್ತು ಹೋಗುವಾಗ ಪಂಚಿಂಗ್ ಮಾಡಿ ಹೋಗಲು ಬಯೋಮೆಟ್ರಿಕ್ ಮೆಷಿನ್ ನ್ನು ಜಾರಿಗೆ ತರುವಂತೆ ಆದೇಶ ಹೊರಡಿಸಿದ್ದಾರೆ. ಅಧಿಕಾರಿಗಳು, ಸಿಬ್ಬಂದಿ, ಅಪರಿಚಿತರು ಕಚೇರಿಗೆ ಬಂದು ಹೋಗುವುದರ ಮೇಲೆ ಗಮನ ಹರಿಸಲು ಸಿಸಿಟಿವಿ ಕ್ಯಾಮರಾಗಳನ್ನು ನಿಯೋಜಿಸಲು ಕೂಡ ಆದೇಶ ನೀಡಿದ್ದಾರೆ.
ಸರ್ಕಾರಿ ಕಚೇರಿಗೆ ತಡವಾಗಿ ಕೆಲಸಕ್ಕೆ ಬರುವವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆದೇಶ ಹೊರಡಿಸಿದ್ದರು. ಅದನ್ನು ಕರ್ನಾಟಕದಲ್ಲಿ ಇದೀಗ ಬಿಜೆಪಿ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಕೇಂದ್ರ ಸರ್ಕಾರದ ಈ ಕಟ್ಟುನಿಟ್ಟಿನ ಆದೇಶದ ಪರಿಣಾಮ ಬ್ಯಾಂಕ್, ಅಂಚೆ ಕಚೇರಿ ಮತ್ತು ಇತರ ಸರ್ಕಾರಿ ಕಚೇರಿಗಳಲ್ಲಿ ನೋಡಬಹುದಾಗಿದೆ.
ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರು ಸರ್ಕಾರಿ ಕಚೇರಿಯಲ್ಲಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹಲವು ಬಾರಿ ದೂರು ಬಂದಿರುವ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಕೆಲವೊಮ್ಮೆ ಸರ್ಕಾರಿ ಕಚೇರಿಯಲ್ಲಿ ಸಿಬ್ಬಂದಿ ರಿಜಿಸ್ಟರ್ ದಾಖಲಾತಿ ಪುಸ್ತಕದಲ್ಲಿ ಹಾಜರಾತಿ ಹಾಕಿರುತ್ತಾರೆ, ಆದರೆ ಕುರ್ಚಿ ಮೇಲೆ ಉಪಸ್ಥಿತರಿರುವುದಿಲ್ಲ. ಇವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಹ ರಾಜ್ಯ ಸರ್ಕಾರ ಮುಂದಾಗಿದೆ. ಕೇವಲ ಬೆಂಗಳೂರು ಮಾತ್ರವಲ್ಲದೆ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ಕಚೇರಿ ನೌಕರರ ಮೇಲೆ ಹದ್ದಿನ ಕಣ್ಣಿರಿಸಲು ರಾಜ್ಯ ಸರ್ಕಾರ ಮುಂದಾಗಿದೆ.