ರಾಜ್ಯ

ಪ್ಲಾಸ್ಟಿಕ್ ನಿಷೇಧ ಅಭಿಯಾನ: ಒಂದೇ ತಿಂಗಳಲ್ಲಿ 2.8 ಕೋಟಿ ರೂ. ದಂಡ ವಿಧಿಸಿದ ಬಿಬಿಎಂಪಿ

Lingaraj Badiger

ಬೆಂಗಳೂರು: ಬೆಂಗಳೂರು ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಒಂದೇ ತಿಂಗಳಲ್ಲಿ ಬರೋಬ್ಬರಿ 24 ಟನ್ ಪ್ಲಾಸ್ಟಿಕ್ ಮುಟ್ಟುಗೋಲು ಹಾಕಿಕೊಂಡಿದ್ದು, 2.8 ಕೋಟಿ ರೂ. ಭಾರಿ ದಂಡ ವಿಧಿಸಿದೆ. 

ಕಳೆದ ಜುಲೈ 15ರಿಂದ ಪಾಲಿಕೆ ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಅಭಿಯಾನ ಆರಂಭಿಸಿದ್ದು, ಇಲ್ಲಿನ ಆರೋಗ್ಯಾಧಿಕಾರಿಗಳು ಎಲ್ಲಾ ವಾರ್ಡ್ ಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿ ಮಳಿಗೆಗಳ ಮೇಲೆ ದಾಳಿ ಮಾಡಿ  ಪ್ಲಾಸಿಕ್ ಜಪ್ತಿ ಮಾಡುವುದರ ಜೊತೆಗೆ ದಂಡ ವಿಧಿಸುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಸೆಪ್ಟೆಂಬರ್ 1ರಿಂದ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಪ್ಲಾಸ್ಟಿಕ್  ಕೈಚೀಲದ ಬದಲು ಪೇಪರ್, ಬಟ್ಟೆ, ಜ್ಯೂಟ್ ಬ್ಯಾಗ್(ನಾರಿನಿಂದ ತಯಾರಿಸಿದ ಕೈ ಚೀಲ) ಹಾಗೂ  ಜೈವಿಕ ಪದಾರ್ಥಗಳಿಂದ ತಯಾರಿಸಿದ ಬ್ಯಾಗನ್ನು ಬಳಸಬಹುದು.  ಈ ಕುರಿತು ನಾಗರಿಕರಲ್ಲಿ  ಅರಿವು ಮೂಡಿಸಲು ಸೆಪ್ಟೆಂಬರ್ ಮೊದಲ ವಾರದಲ್ಲಿ ಮೂರು ದಿನಗಳ ಕಾಲ “ಪ್ಲಾಸ್ಟಿಕ್  ಮೇಳ”ವನ್ನು ಆಯೋಜಿಸಲಾಗುವುದು ಎಂದರು.

ನಗರದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ  ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕಾದರೆ ಬಿಬಿಎಂಪಿಯ ಜೊತೆ ಪೊಲೀಸ್ ಹಾಗೂ ಮಾಲಿನ್ಯ  ನಿಯಂತ್ರಣ ಮಂಡಳಿ ಕೂಡಾ ಕೈಜೋಡಿಸಬೇಕು. ಈ ಸಂಬಂಧ ಸರ್ಕಾರದ ಅಪರ ಮುಖ್ಯ  ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗುವುದು ಎಂದರು.

ಮಾರುಕಟ್ಟೆಗಳ ಮೇಲೆ ದಾಳಿ:
ಮಾರುಕಟ್ಟೆಗಳಲ್ಲಿಯೇ  ಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಮುಂದಿನ  ವಾರದಿಂದ ಪಾಲಿಕೆ ಸದಸ್ಯರುಗಳು ಹಾಗೂ ಅಧಿಕಾರಿಗಳ ಸಹಯೋಗದಲ್ಲಿ ಎಲ್ಲಾ  ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವ ಮಳಿಗೆಗಳ ಮೇಲೆ ದಾಳಿ ನಡೆಸಿ ದಂಡ  ವಿಧಿಸಲಾಗುತ್ತದೆ. ಜೊತೆಗೆ ಪರ್ಯಾಯವಾಗಿ ಬಟ್ಟೆ, ಪೇಪರ್ ಹಾಗೂ ಜ್ಯೂಟ್ ಬ್ಯಾಗ್‌ಗಳನ್ನು  ಬಳಸುವಂತೆ ವ್ಯಾಪಾರಸ್ಥರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದು ಮಹಾಪೌರರು ತಿಳಿಸಿದರು.

SCROLL FOR NEXT