ರಾಜ್ಯ

ಸಂಸದ ಡಿವಿಎಸ್, ತೇಜಸ್ವಿ ಸೂರ್ಯರಿಂದ ಕನ್ನಡಕ್ಕೆ ಅವಮಾನ: ವಾಟಾಳ್ ನಾಗರಾಜ್ ಆಕ್ರೋಶ

Raghavendra Adiga

ಬೆಂಗಳೂರು: ರಾಜ್ಯದಲ್ಲಿ ಕನ್ನಡ ಭಾಷೆ ಹಾಗೂ ಕನ್ನಡಿಗರೇ ಸಾರ್ವ ಭೌಮರು ಎಂದು ಹೋರಾಟ ಮಾಡುವವರನ್ನು ರೌಡಿಗಳು ಮತ್ತು ಕಿಡಿಗೇಡಿಗಳೆಂದು ಹೇಳಿ ಸಂಸದ ಸದಾನಂದ ಗೌಡ ಹಾಗೂ ತೇಜಸ್ವಿ ಸೂರ್ಯ ಇಬ್ಬರೂ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ
  
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮೇಲೆ ಹಿಂದಿ ಭಾಷೆ ಹೇರಿಕೆ ಚರ್ಚೆಯ ಬಿಸಿ ಇರುವಾಗಲೇ, ಇಬ್ಬರು ಸಂಸದರು ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದು, ಕನ್ನಡ ಭಾಷೆಯ ಸಲುವಾಗಿ ಹೋರಾಟ ನಡೆಸಿದವರನ್ನು ಪುಂಡರು ಎಂದು ಹೇಳುವ ಮೂಲಕ ಅಪಮಾನದ ಮಾತುಗಳನ್ನು ಆಡಿದ್ದಾರೆ. ಅಲ್ಲದೆ, ಕನ್ನಡ ಭಾಷೆಯ ಪರವಾದ ಹೋರಾಟದ ನೈತಿಕತೆಯನ್ನು ಕುಂದಿಸುವ ಪ್ರಯತ್ನ ಮಾಡಿದ್ದಾರೆ ಎಂದು ವಿಷಾದಿಸಿದರು.
  
ಸಂಸದ ಸದಾನಂದ ಗೌಡ ಹಾಗೂ ತೇಜಸ್ವಿ ಸೂರ್ಯರಿಗೆ ಕನ್ನಡಗರು ಯಾರೂ ಮತದಾನ ಹಾಕಿಲ್ಲವೆಂಬಂತೆ ನಡೆದುಕೊಳ್ಳುತ್ತಿದ್ದಾರೆ. ಈ ಇಬ್ಬರು ಸಂಸದರನ್ನು ರಾಜ್ಯದಿಂದ ಆಯ್ಕೆ ಮಾಡಿರುವುದು ನಾಡಿನ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಯ ಸೌರ್ಹಾದತೆಯನ್ನು ಎತ್ತಿ ಹಿಡಿಯುವುದಕ್ಕೆ ಹೊರತು, ನಾಶ ಮಾಡುವುದಕ್ಕಲ್ಲ. ಇನ್ನು, ಕನ್ನಡಕ್ಕಾಗಿ ಹೋರಾಟ ಮಾಡುವವರನ್ನು ವಿರೋಧಿಸುವ ನಿಲುವು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
  
ರಾಜ್ಯದಲ್ಲಿ ಹಿಂದಿ ಜನರ ಬೆಳವಣಿಗೆ ಅಧಿಕವಾಗುತ್ತಿದೆ. ಅನ್ಯ ಭಾಷಿಗರು ಇಲ್ಲಿಗೆ ವ್ಯಾಪಾರ ಹಾಗೂ ಉದ್ಯೋಗದ ಉದ್ದೇಶಕ್ಕೆ ಬಂದು ನೆಲೆ ನಿಂತು, ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಅವರಿಗೆ ಪ್ರಾಮಾಣಿಕತೆಯೂ ಇಲ್ಲ. ಕನ್ನಡ ಭಾಷೆ ಕಲಿಯುವ ಆಸಕ್ತಿಯೂ ಇಲ್ಲ. ಒಂದೆಡೆ ಮಾರ್ವಾಡಿಗಳು, ಇನ್ನೊಂದೆಡೆ ತಮಿಳರು ತಮ್ಮದೇ ಬಣ ಕಟ್ಟಿಕೊಂಡಿದ್ದಾರೆ. ಇದು ತಮಿಳುನಾಡಲ್ಲ, ರಾಜಸ್ತಾನವಲ್ಲ. ಇಲ್ಲಿ ಕನ್ನಡಿಗರೇ ಸಾರ್ವಭೌಮರು ಎಂದು ಸ್ಪಷ್ಟಪಡಿಸಿದರು.
  
ರಾಜ್ಯದಲ್ಲಿ ಪ್ರತಿಯೊಬ್ಬರು ಕನ್ನಡವನ್ನು ಮಾತಾಡಲೇ ಬೇಕು. ಧ್ವನಿವರ್ಧಕಗಳಲ್ಲೂ ಕನ್ನಡವೇ ಕೇಳಬೇಕು. ಕನ್ನಡಿಗರಿಗೂ ಉದ್ಯೋಗ ಸಿಗಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ಕನ್ನಡ ಉಳಿಸುವ, ಕನ್ನಡಕ್ಕೆ ಅಪಾಯವನ್ನುಂಟು ಮಾಡುವವರ ವಿರುದ್ಧ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
  
ಕನ್ನಡ ಸಾರ್ವಭೌಮತ್ವಕ್ಕಾಗಿ ಹಿಂದಿನ ಹೋರಾಟದ ಸೆಲೆ ಈಗ ಇಲ್ಲ. ಅಂದಿನ ಚಿಂತನೆಯೂ ಇಲ್ಲವಾಗಿದೆ. ಇನ್ನು, ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕೆಂದು ಒತ್ತಾಯಿಸಿದರು.

SCROLL FOR NEXT