ರಾಜ್ಯ

ಮೂವರು ಮುಖ್ಯಮಂತ್ರಿ ನೀಡಿದ ಜಿಲ್ಲೆಗೆ ಎರಡು ತಿಂಗಳಲ್ಲೇ ಕೈ ಜಾರಿದ ಪ್ರತಿಪಕ್ಷ ಸ್ಥಾನ

Srinivasamurthy VN

ಬಾಗಲಕೋಟೆ: ರಾಜ್ಯ ವಿಧಾನಸಭೆ ಇತಿಹಾಸದಲ್ಲೇ ಅಖಂಡ ವಿಜಯಪುರ ಜಿಲ್ಲೆಗೆ ಇದೇ  ಮೊದಲ ಬಾರಿಗೆ ಸಿಕ್ಕಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನ ಬರೋಬ್ಬರಿ ಎರಡು ತಿಂಗಳಲ್ಲಿ ಕೈ ಬಿಟ್ಟಿದೆ.

ಅಖಂಡ ವಿಜಯಪುರ ಜಿಲ್ಲೆ ರಾಜ್ಯಕ್ಕೆ ಎಸ್.ನಿಜಲಿಂಗಪ್ಪ, ಎಸ್.ಆರ್. ಕಂಠಿ ಮತ್ತು ಬಿ.ಡಿ ಜತ್ತಿ ಹೀಗೆ ಮೂವರು ಮುಖ್ಯಮಂತ್ರಿಗಳನ್ನು ನೀಡಿದ್ದರೂ ವಿರೋಧ ಪಕ್ಷದ ನಾಯಕನನ್ನು ಕೊಟ್ಟಿರಲಿಲ್ಲ. ಯಾವಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಬಾದಾಮಿ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಗೊಂಡರೋ ಆಗ ಅವರು ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. 

ಕಳೆದ ಮೂರು ತಿಂಗಳು ಹಿಂದೆ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಸಿದ್ದರಾಮಯ್ಯ ಜಿಲ್ಲೆಯಿಂದ ಮೊದಲ ಬಾರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಗೊಂಡರು. ವಿರೋಧ ಪಕ್ಷದ ನಾಯಕರಾಗಿ ಎರಡು ತಿಂಗಳು ಕಳೆಯುವಷ್ಟರಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಜಿಲ್ಲಾ ರಾಜಕಾರಣದಲ್ಲಿ ದಾಖಲಾರ್ಹ ಎನ್ನಬಹುದಾಗಿದೆ. ಪಕ್ಷದ ಹೈ ಕಮಾಂಡ್ ಅಕ್ಟೋಬರ್ ೯ ರಂದು ಸಿದ್ದರಾಮಯ್ಯ ಹಾಗೂ ಎಸ್.ಆರ್.ಪಾಟೀಲ ಅವರನ್ನು ಪ್ರತಿಪಕ್ಷದ ನಾಯಕರುಗಳನ್ನಾಗಿ ನೇಮಕ ಮಾಡಿದ ಆದೇಶ ಹೊರಡಿಸಿತ್ತು. ಡಿಸೆಂಬರ್ ೯ ಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ.

ಆಪರೇಷನ್ ಕಮಲದ ಫಲವಾಗಿ ರಾಜ್ಯದ ೧೫ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಲ್ಲಿ ಆಯ್ಕೆಗೊಳ್ಳುವ ಮೂಲಕ ಹೀನಾಯ ಸೋಲು ಕಂಡಿದೆ. ಸೋಲಿನ ಬೆನ್ನಲ್ಲೇ ಬಾದಾಮಿ ಶಾಸಕರೂ ಆಗಿರುವ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಉಪಚುನಾವಣೆಯಲ್ಲಿನ ಹೀನಾಯ ಸೋಲಿನ ಜತೆಗೆ ಕಾಂಗ್ರೆಸ್ ಪಾಳೆಯದಲ್ಲಿ ಅವರ ವಿರುದ್ಧ ಕುದಿಯುತ್ತಿದ್ದ ಅಸಮಾಧಾನ ಭುಗಿಲೆದ್ದಿದೆ. ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ನಡೆ ಕಾರಣವಾಗಿದೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಂಗಿ ಪ್ರಚಾರ ನಡೆಸಿದರು ಎನ್ನುವ ಆರೋಪ ಚುನಾವಣೆ ಬಹಿರಂಗ ಪ್ರಚಾರದ ವೇಳೆಯೇ ಕೇಳಿ ಬಂದಿತ್ತು. 15 ಸ್ಥಾನಗಳಿಗೆ ನಡೆದ ಫಲಿತಾಂಶದ ಬೆನ್ನಲ್ಲೇ ಸಿದ್ದರಾಮಯ್ಯ ವಿರುದ್ಧ ಪಕ್ಷದಲ್ಲಿ ಆಕ್ರೋಶ ಬಹಿರಂಗೊಂಡಿದೆ. ಇದನ್ನು ಶಮನ ಮಾಡಲೆಂದೇ ನೈತಿಕ ಹೊಣೆ ನೆಪದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆಯನ್ನು ಪಕ್ಷದ ಹೈ ಕಮಾಂಡ್ ಎಷ್ಟರ ಮಟ್ಟಿಗೆ ಸ್ವೀಕಾರ ಮಾಡುತ್ತದೋ ಎನ್ನುವುದು ಇನ್ನೂ ಯಕ್ಷಪ್ರಶ್ನೆಯಾಗಿದ್ದರೂ ವಿಧಾನಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಜಿಲ್ಲೆಗೆ ಸಿಕ್ಕಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನ ಕೇವಲ ಎರಡು ತಿಂಗಳಲ್ಲೇ ತಪ್ಪಿದಂತಾಗಿದೆ.
ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಜಿಲ್ಲಾ ಕಾಂಗ್ರೆಸ್ ಪಾಳೆಯದಲ್ಲಿ ನೀರವ ಮೌನದ ವಾತಾವರಣ ಸೃಷ್ಟಿಸಿದೆ. ಸಿದ್ದರಾಮಯ್ಯ ಮುಂದಿನ ನಡೆದ ಏನಿರಬಹುದು ಎನ್ನುವ ಚಿಂತನೆಯಲ್ಲಿದ್ದಾರೆ.

-ವಿಠ್ಠಲ ಆರ್. ಬಲಕುಂದಿ

SCROLL FOR NEXT