ರಾಜ್ಯ

ಬೆಂಗಳೂರು: ಶಾಲೆಯಲ್ಲಿ ಜಗಳ, ಪೋಷಕರನ್ನು ಕರೆತರಲು ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

Lingaraj Badiger

ಬೆಂಗಳೂರು: ಶಾಲೆಯಲ್ಲಿ ಉಂಟಾದ ಜಗಳದ ಹಿನ್ನೆಲೆಯಲ್ಲಿ ಪೋಷಕರನ್ನು ಕರೆದುಕೊಂಡು ಬರುವಂತೆ ಶಾಲೆಯ ಮುಖ್ಯ ಶಿಕ್ಷಕರು ಹೇಳಿದ್ದರಿಂದ ಆತಂಕಗೊಂಡ ವಿದ್ಯಾರ್ಥಿ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದೊಮ್ಮಲೂರಿನ ಕೆಆರ್‌ಎಲ್‌ಎಸ್ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ವೇಣುಗೋಪಾಲ್(13) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎರಡು ದಿನಗಳ ಹಿಂದೆ ಶಾಲೆಯಲ್ಲಿ ವೇಣುಗೋಪಾಲ್ ಮತ್ತು ಸಹಪಾಠಿಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ವೇಣುಗೋಪಾಲ್ ಚಾಕು ಹಿಡಿದು ಇತರ ವಿದ್ಯಾರ್ಥಿಗಳಿಗೆ ಬೆದರಿಸಿದ್ದ. ಇದನ್ನು ಕಂಡ ಶಿಕ್ಷಕರು ವಿದ್ಯಾರ್ಥಿಯನ್ನು ತರಾಟೆಗೆ ತೆಗೆದುಕೊಂಡು ಶಾಲೆ ಒಳಗೆ ಬರಬೇಕಾದರೆ ಪೋಷಕರನ್ನು ಕರೆತರುವಂತೆ ಸೂಚಿಸಿದ್ದರು.

ಪೋಷಕರಿಗೆ ಈ ವಿಷಯ ತಿಳಿದರೆ ಮನೆಯಲ್ಲೂ ಬಯ್ಯುತ್ತಾರೆ ಎಂದು ಆತಂಕಗೊಂಡ ವೇಣುಗೋಪಾಲ್ ಮನೆಗೆ ಹೋಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಶಾಲೆ ಎದುರು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಇತರ ಪೋಷಕರೂ ಶಾಲೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

SCROLL FOR NEXT