ರಾಜ್ಯ

ಡಾರ್ಕ್ ವೆಬ್‌ಸೈಟ್ ಮೂಲಕ ನೆದರ್ಲಾಂಡ್‌ನಿಂದ ಮಾದಕ ವಸ್ತು ತರಿಸುತ್ತಿದ್ದ ಮೂವರ ಬಂಧನ: 20 ಲಕ್ಷ ರೂ. ಮೌಲ್ಯದ ಗಾಂಜಾ ವಶ

Raghavendra Adiga

ಬೆಂಗಳೂರು: ನೆದರ್ಲಾಂಡ್‌ನಿಂದ ಡಾರ್ಕ್ ವೆಬ್‌ಸೈಟ್ ಮೂಲಕ ಮಾದಕ ವಸ್ತುಗಳನ್ನು ತರಿಸುತ್ತಿದ್ದ ಬಿಹಾರ ಮೂಲದ ಇಬ್ಬರು ಸೇರಿ ಮೂವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಸುಮಾರು 20 ಲಕ್ಷ ರೂ.ಬೆಲೆಯ 225 ಎಲ್ಎಸ್‌ಡಿ ಸ್ಟಿಪ್ಸ್, 2 ಕೆ.ಜಿ ಗಂಜಾವನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಬಿಹಾರದ ಪಾಟ್ನಾದ ಎಸ್.ಕೆ.ಪುರಿ ಸದಾಧರ್ ಪಟೇಲ್ ನಾರ್ತ್‌ನ ಎ.ಆರ್.ಪ್ಯಾಲೇಸ್ ನಿವಾಸಿ ಅಮಾತ್ಯ ರಿಶಿ (23), ಬಿಹಾರದ ದರ್ಬಾಂಗ್ ಜಿಲ್ಲೆಯ ಘನಶ್ಯಾಮ್‌ಪುರ ನಿವಾಸಿ ಮಂಗಲ್ ಮುಕ್ಯ (30) ಹಾಗೂ ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿ ದ್ವಾರಕನಗರದ ದ್ವಾರಕಾ ಅಪಾರ್ಟ್‌ಮೆಂಟ್‌ ನಿವಾಸಿ ಆದಿತ್ಯ ಕುಮಾರ್ (21) ಬಂಧಿತ ಆರೋಪಿಗಳು.

ಆರೋಪಿ ರಿಶಿ ಎಂಬಾತ ಜೈನ್ ಯುನಿವರ್ಸಿಟಿಯಲ್ಲಿ ಬ್ಯಾಚುಲರ್ ಆಫ್ ಮ್ಯಾನೇಜ್ಮೆಮಟ್ ಸ್ಟಡೀಸ್‌ನಲ್ಲಿ ವಿದ್ಯಾಭ್ಯಾಸಕ್ಕಾಗಿ ಬಂದು ಮೈಸೂರು ರಸ್ತೆಯ ಕೆಂಗೇರಿಯಲ್ಲಿ ಎಂ.ಬಿ.ಆರ್. ಶಾಂರ್ತಿಲಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ. ಈತ ಡಾರ್ಕ್ ವೆಬ್‌ಸೈಟ್ ಮೂಲಕ ಮಾದಕ ವಸ್ತುಗಳನ್ನು ನೆದರ್ಲಾಂಡ್‌ನಿಂದ ತರಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಆತನ ಮನೆಗೆ ದಾಶಳಿ ನಡೆಸಿ ಆತನನ್ನು ಬಂಧಿಸಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದಾಳಿಯ ವೇಳೆ ಅಮಾತ್ಯ ರಿಶಿ ಹಾಗೂ ಆತನ ಸಹಚರರು ನೆದರ್ಲಾಂಡ್‌ನಿಂದ ತರಿಸಿದ್ದ 225 ಎಲ್.ಎಸ್.ಡಿ. ಸ್ಟಿಪ್ಸ್‌ಗಳನ್ನು 2 ಕೆ.ಜಿ. ಗಾಂಜಾ, 10,200 ರೂ.ನಗದು, ಗಾಂಜಾ ಗಿಡಗಳಿದ್ದ ಪಾಟ್ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಕಂಪ್ಯೂಟರ್ ಸಿಸ್ಟಮ್, 3 ಮೊಬೈಲ್ ಫೋನ್‌ಗಳು, ಎಲ್ಇಡಿ ಲಯಟ್ ಹಾಗೂ ಸ್ಟಾಂಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಪಾಸಣೆ ವೇಳೆ ವಿದೇಶದಿಂದ ಗಾಂಜಾ ಗಿಡಗಳ ಬೀಜಗಳನ್ನು ತರಿಸಿಕೊಂಡು ತನ್ನ ಮನೆಯಲ್ಲಿಯೇ ಮಡಕೆಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಸುತ್ತಿರುವುದು ಕಂಡುಬಂದಿದೆ. ಮನೆಯ ಒಳಗಡೆ ಗಾಂಜಾ ಗಿಡಗಳನ್ನು ಬೆಳೆಸಲು ವಿಶೇಷ ರೀತಿಯಾದ ವಿದ್ಯುತ್ ದ್ವೀಪದ ವ್ಯವಸ್ಥೆ ಮಾಡಿದ್ದು, ಅದನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಆರೋಪಿಗಳು ತಮ್ಮ ಮನೆಯಲ್ಲಿದ್ದ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಸಹಾಯದಿಂದ ವಿದೇಶದಿಂದ ಮಾದಕ ವಸ್ತುಗಳನ್ನು ತರಿಸುತ್ತಿದ್ದು, ಅದಕ್ಕಾಗಿ ಕಂಪ್ಯೂಟರ್ ಮತ್ತು ಹಾರ್ಡ್ ಡಿಸ್ಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಇತ್ತೀಚೆಗೆ ಕೆನಡಾ ದೇಶದಿಂದ ಹೈಡ್ರೋ ಗಾಂಜಾವನ್ನು ತರಿಸುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಿದೇಶದಿಂದ ಕೊರಿಯರ್ ಮೂಲಕ ಮಾದಕದ್ರವ್ಯಗಳನ್ನು ತರಿಸಿ, ನಗರದಲ್ಲಿ ಮಾರಾಟ ಮಾಡುತ್ತಿದ್ದ 2ನೇ ಪ್ರಕರಣವನ್ನು 15 ದಿನಗಳ ಅಂತರದಲ್ಲಿ ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಭಾಸ್ಕರ್ ರಾವ್ ತಿಳಿಸಿದರು.

SCROLL FOR NEXT