ರಾಜ್ಯ

ಸಚಿವಾಲಯದ ಸೇವೆಗಳನ್ನೂ ಸಕಾಲದಡಿ ತರಲು ನಿರ್ಧಾರ- ಸಚಿವ ಸುರೇಶ್ ಕುಮಾರ್

Nagaraja AB

ಬೆಂಗಳೂರು: ವಿಧಾನಸೌಧ - ವಿಕಾಸ ಸೌಧದ ಸಚಿವಾಲಯಗಳ ಸೇವೆಗಳನ್ನೂ ಸಕಾಲ ಯೋಜನೆ ವ್ಯಾಪ್ತಿಗೆ ತರಲಾಗುವುದು ಎಂದು  ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಇಲಾಖೆ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. 

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವಾಲಯದ ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮತಿ ಸೂಚಿಸಿದ್ದು, ವಿಧಾನಸೌಧ ಸಚಿವಾಲಯದ ಸೇವೆಗಳನ್ನು ಸಕಾಲದ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳುತ್ತೇವೆ. ವಿಧಾನಸೌಧ, ವಿಕಾಸ ಸೌಧದಲ್ಲಿ  ಹಲವು ಅರ್ಜಿಗಳು ವಿಲೇವಾರಿಯಾಗದೇ ಸಾರ್ವಜನಿಕರು ಕಾಯುತ್ತಿರುವುದು ಹೆಚ್ಚಾಗುತ್ತಿವೆ. ಹೀಗಾಗಿ ಸಚಿವಾಲಯದ ಸೇವೆಗಳನ್ನೂ ಸಕಾಲ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಕಾಲ ಯೋಜನೆ ಕಾರ್ಯಪಾಲನಾ ವರದಿ ಬಿಡುಗಡೆ ಮಾಡಿದ ಅವರು, ಇದುವರೆಗೆ ಸಕಾಲ ಯೋಜನೆಯಡಿ 20,45,31,702ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಅಕ್ಟೋಬರ್ ನಲ್ಲಿ ಚಿಕ್ಕಬಳ್ಳಾಪುರ, ನವೆಂಬರ್ ನಲ್ಲಿ ಯಾದಗಿರಿ, ಚಿಕ್ಕಬಳ್ಳಾಪುರ, ಉಡುಪಿ ಜಿಲ್ಲೆಗಳು ಅತ್ಯುತ್ತುಮ ಸಾಧನೆಮಾಡಿ ಅಗ್ರ ಸ್ಥಾನಕ್ಕೇರಿವೆ.  ಬೆಂಗಳೂರು ನಗರ ಜಿಲ್ಲೆ ಅತ್ಯಂತ ಕಳಪೆ ಸಾಧನೆ ಮಾಡಿದ್ದು, ಅದರಲ್ಲೂ ಬಿಬಿಪಿಎಂಪಿ ತೀರಾ ಹಿಂದುಳಿದಿದೆ. ಹಾಗಾಗಿ ಬಿಬಿಎಂಪಿಯ ಬಗ್ಗೆ ಪ್ರತ್ಯೇಕ ಪ್ರಗತಿ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ನಗರಾಭಿವೃದ್ಧಿ ಇಲಾಖೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ 1, 3349 ಅರ್ಜಿಗಳು ವಿಲೇವಾರಿಯಾಗಿರಲಿಲ್ಲ, ಅದು ನವೆಂಬರ್ ವೇಳೆಗೆ 6901ಕ್ಕೆ ಏರಿಕೆ ಆಗಿದೆ. ನವೆಂಬರ್ ತಿಂಗಳಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಗುಡಿಬಂಡೆ, ತುಮಕೂರು ಜಿಲ್ಲೆಯ ತುರುವೇಕೆರೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕುಗಳು  ಅತ್ಯುತ್ತಮ ಸಾಧನೆ ಮಾಡಿವೆ. ಬಳ್ಳಾರಿಯ ಹರಪ್ಪನಹಳ್ಳಿ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಹಾಗೂ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕ್ ಗಳು ಕಳಪೆ ಸಾಧನೆ ಮಾಡಿವೆ ಎಂದರು. 

ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ  ಆರಂಭಿಸಲಾಗಿರುವ 'ಜನಸೇವಕ' ಸೇವೆಯನ್ನು ಬೊಮ್ಮನಹಳ್ಳಿ, ರಾಜಾಜಿನಗರ, ಮಹದೇವಪುರಗಳಿಗೂ ಶೀಘ್ರದಲ್ಲಿಯೇ ವಿಸ್ತರಿಸಲಾಗುವುದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ,  ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಬೆಸ್ಕಾಂಗೆ ಸಂಬಂಧಿಸಿದ ಸೇವೆ ಪೂರೈಕೆ ಅಥವಾ  ಅರ್ಜಿ ಸ್ವೀಕರಿಸದಿರುವುದಕ್ಕೆ  ಅರ್ಜಿಗಳು ಬಂದಿರುವುದಾಗಿ ಅವರು ತಿಳಿಸಿದರು. 

ನವೆಂಬರ್ ತಿಂಗಳಲ್ಲಿ ಬೀದರ್, ರಾಮನಗರ, ಕೊಪ್ಪಳ, ಜಿಲ್ಲೆಗಳಲ್ಲಿ ಅತಿ ಹೆಚ್ಚು ಅರ್ಜಿಗಳನ್ನು ತಿರಸ್ಕರಿಸರಿಸಲಾಗಿದ್ದು, ಬೆಂಗಳೂರು ನಗರ, ವಿಜಯಪುರ, ಬೆಳಗಾವಿ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಅರ್ಜಿ ವಿಲೇವಾರಿಯಲ್ಲಿ ಹೆಚ್ಚಿನ ವಿಳಂಬ ಮಾಡಲಾಗಿದೆ.  ಕಂದಾಯ, ಗೃಹ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ಸಾರಿಗೆ ಇಲಾಖೆಯ ಅರ್ಜಿ ವಿಲೇವಾರಿಯಲ್ಲಿ ಹೆಚ್ಚಿನ ವಿಳಂಬವಾಗಿರುವುದು  ಕಂಡುಬಂದಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು. 

SCROLL FOR NEXT