ರಾಜ್ಯ

ಬೆಂಗಳೂರು: ಜ.3ಕ್ಕೆ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನಕ್ಕೆ ಪ್ರಧಾನಿ ಮೋದಿ ಚಾಲನೆ

Manjula VN

ಬೆಂಗಳೂರು: ವಿಜ್ಞಾನ, ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಯಶಸ್ಸು ಸಾಧಿಸುವ ಉದ್ದೇಶವನ್ನು ಹೊಂದಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನಕ್ಕೆ ಜ,3 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ. 

ಸಮ್ಮೇಳನ ಉದ್ಘಾಟನೆಗೊಳ್ಳುವ ದಿನವೇ ನಗರದಲ್ಲಿ ರೈತರ ಸಮಾವೇಶ ಕೂಡ ಇದ್ದು, ಈ ಸಮಾವೇಶದಲ್ಲಿಯೂ ಮೋದಿಯವರು ಪಾಲ್ಗೊಂಡು ರೈತರನ್ನುದ್ದೇಶಿ ಮಾತನಾಡಲಿದ್ದಾರೆಂದು ಮೂಲಗಳು ತಿಳಿಸಿವೆ. 

ಈ ಕುರಿತು ಮಾಹಿತಿ ನೀಡಿರುವ ಸಿಎಂ ಯಡಿಯೂರಪ್ಪ ಅವರು, ಜ.3 ರಂದು ರೈತರ ಸಮಾವೇಶ ಹಿನ್ನೆಲೆಯಲ್ಲಿ ಜನವರಿ 2 ರಂದು ಪ್ರಧಾನಿ ಮೋದಿಯವರು ನಗರಕ್ಕೆ ಆಗಮಿಸಲಿದ್ದಾರೆ. ತುಮಕೂರಿನಲ್ಲಿ ರೈತರ ಸಮಾವೇಶ ನಡೆಯಲಿದ್ದು, ಸಮಾವೇಳ ಕುರಿತು ಚರ್ಚೆಗಳು ನಡೆಯುತ್ತಿವೆ. ಅಂತಿಮ ಮಾಹಿತಿಗಳಿಗಾಗಿ ಪ್ರಧಾನಮಂತ್ರಿಗಳ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ರ್ಯಾಲಿಯಲ್ಲಿ ದೊಡ್ಡ ಮಟ್ಟದಲ್ಲಿ ರೈತರು ಸೇರಲಿದ್ದಾರೆ. ಜ.3 ರಂದು 5 ದಿನಗಳ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್'ಗೆ ಚಾಲನೆ ನೀಡಲಿದ್ದಾರೆಂದ ಹೇಳಿದ್ದಾರೆ. 

ಈ ಬಾರಿಯ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಕೃಷಿ ಮತ್ತು ವನ ವಿಜ್ಞಾನ, ಜಾನುವಾರು, ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ, ಮಾನವ ಶಾಸ್ತ್ರ ಮತ್ತು ನಡವಳಿಕೆ ವಿಜ್ಞಾನ, ರಸಾಯನಿಕ ವಿಜ್ಞಾನಗಳು, ಭೂ ರಚನಾ ವ್ಯವಸ್ಥೆ- ಎಂಜಿನಿಯರಿಂಗ್, ಪರಿಸರ ವಿಜ್ಞಾನಗಳು, ಮಾಹಿತಿ ಸಂವಹನ ವಿಜ್ಞಾನ-ತಂತ್ರಜ್ಞಾನ, ಗಣಿತ, ವೈದ್ಯಕೀಯ ವಿಜ್ಞಾನ, ಭೌತಿಕ ವಿಜ್ಞಾನ, ಸಸ್ಯ ವಿಜ್ಞಾನಗಳು ಮುಖ್ಯ ವಿಷಯಗಳಾಗಿರಲಿವೆ ಎಂದು ತಿಳಿದುಬಂದಿದೆ. 

ಸಮ್ಮೇಳನದಲ್ಲಿ ವಿದೇಶಿ ಸಂಸ್ಥೆಗಳಿಂದ ನೊಬೆಲ್ ಪ್ರಶಸ್ತಿ ವಿಜೇತರು, ವಿಜ್ಞಾನಿಗಳು, ವಿದ್ವಾಂಸರು ಹಾಗೂ ಪ್ರಧಾನ ಉಪನ್ಯಾಸಕರು, ಕಾರ್ಯನೀತಿ ರಚಿಸುವವರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

SCROLL FOR NEXT