ರಾಜ್ಯ

ಪೌರತ್ವ ಕಾಯ್ದೆ ಕಿಚ್ಚು: ರಾಷ್ಟ್ರಗೀತೆ ಹಾಡಿ ಪ್ರತಿಭಟನಾಕಾರರ ಮನಗೆದ್ದ ಬೆಂಗಳೂರು ಪೊಲೀಸ್ ಅಧಿಕಾರಿ

Manjula VN

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಡೀ ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು, ಪ್ರತಿಭಟನೆಗಳು ನಡೆಯುತ್ತಿದೆ. ಈ ಪ್ರತಿಭಟನೆ ವೇಳೆ ಪೊಲೀಸರು ಪ್ರತಿಭಟಕಾರರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆಂಬ ಆಕ್ರೋಶಗಳು ವ್ಯಕ್ತವಾಗುತ್ತಿರುವ ನಡುವಲ್ಲೇ, ಬೆಂಗಳೂರು ಪೊಲೀಸ್ ಅಧಿಕಾರಿಯೊಬ್ಬರು ರಾಷ್ಟ್ರಗೀತೆ ಹಾಡುವ ಮೂಲಕ ಪ್ರತಿಭಟನಕಾರರ ಮನಗೆದ್ದಿದ್ದಾರೆ. 

ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರು ರಾಷ್ಟ್ರಗೀತೆ ಹಾಡುವ ಮೂಲಕ ಪೌರತ್ವ ಕಾಯ್ದೆ ವಿರುದ್ಧ ಪುರಭವನದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮನಗೆದ್ದಿದ್ದು, ಪ್ರತಿಭಟನೆ ಕೈಬಿಟ್ಟು ಸ್ಥಳದಿಂದ ತೆರಳುವಂತೆ ಮಾಡಿದ್ದಾರೆ. 

ಚೇತನ್ ಸಿಂಗ್ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿರುವ ಹಾಗೂ ರಾಷ್ಟ್ರಗೀತೆ ಹಾಡಿ ಪ್ರತಿಭಟನಾಕಾರರ ಮನಗೆದ್ದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ. ಅಲ್ಲದೆ, ಈ ವಿಡಿಯೋವಿಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. 

ವಿಡಿಯೋದಲ್ಲಿ ಸ್ಥಳದಿಂದ ತೆರಳುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಇದಕ್ಕೆ ಪ್ರತಿಭಟನಾಕಾರರನ್ನು ನಿರಾಕರಿಸಿದ್ದಾರೆ. ಬಳಿಕ ಪ್ರತಿಭಟನೆಗಳನ್ನು ಸಮಾಜ ವಿರೋಧಿ ಶಕ್ತಿಗಳು ತಮ್ಮ ಲಾಬಕ್ಕಾಗಿ ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು ವಿವರಿಸಿರುವ ಚೇತನ್ ಸಿಂಗ್ ಅವರು, ತಮ್ಮ ಮೇಲೆ ನಂಬಿಕೆ ಇಡುವುದಾದರೆ ತಮ್ಮೊಂದಿಗೆ ಎಲ್ಲರೂ ರಾಷ್ಟ್ರಗೀತೆ ಹಾಡುವಂತೆ ತಿಳಿಸಿದ್ದಾರೆ. ಈ ವೇಳೆ ಅಧಿಕಾರಿಯ ಮಾತನ್ನು ಕೇಳಿರುವ ಪ್ರತಿಭಟನಾಕಾರರು ಚೇತನ್ ಸಿಂಗ್ ಅವರೊಂದಿಗೆ ರಾಷ್ಟ್ರಗೀತೆಯನ್ನು ಹಾಡಿ, ಪ್ರತಿಭಟನಾ ಸ್ಥಳದಿಂದ ತೆರಳಿರುವುದು ಕಂಡು ಬಂದಿದೆ. 

SCROLL FOR NEXT