ರಾಜ್ಯ

ಕೆ.ಪಿ. ನಂಜುಂಡಿ ಹೆಸರಲ್ಲಿ ನಕಲಿ ದಾಖಲೆ:  ಸರ್ಕಾರಿ ವೇತನ ಪಡೆದ ವಂಚಕನ ವಿರುದ್ಧ ದೂರು

Shilpa D

ಬೆಂಗಳೂರು: ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಅವರ ಆಪ್ತ ಕಾರ್ಯದರ್ಶಿ ಎಂಬುದಾಗಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದಿಂದ 7 ತಿಂಗಳು ಸಂಬಳ ಪಡೆದಿರುವ ಆರೋಪದಡಿ ಎಸ್‌.ಕೆ. ರವಿಕುಮಾರ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕುಣಿಗಲ್ ತಾಲ್ಲೂಕಿನ ಸಂತೆಮಾತೂರಿನ ಎಸ್.ಕೆ. ರವಿಕುಮಾರ್ ಎಂಬುವವರ ವಿರುದ್ಧ ಸ್ವತಃ ಕೆ.ಪಿ. ನಂಜುಂಡಿ ಬುಧವಾರ ದೂರು ನೀಡಿದ್ದಾರೆ. ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ವಿಧಾನಸೌಧ ಪೊಲೀಸರು ತಿಳಿಸಿದ್ದಾರೆ.

 ನಂಜುಂಡಿ ಅವರ ಆಪ್ತ ಸಹಾಯಕ ಎಂದು ನಕಲಿ ದಾಖಲೆ ಸೃಷ್ಟಿಸಿದ್ದ ರವಿಕುಮಾರ್, ಸರ್ಕಾರದಿಂದ ಏಳು ತಿಂಗಳು ಸಂಬಳವನ್ನು ಸಹ ಪಡೆದುಕೊಂಡಿದ್ದರು. ನಂಜುಂಡಿ ಅವರ ಸಹಿಯನ್ನು ನಕಲು ಮಾಡಿದ್ದ ರವಿಕುಮಾರ್, ಅದನ್ನು ಬಳಸಿಕೊಂಡು ಲೆಟರ್ ಹೆಡ್ ಕೂಡ ಸೃಷ್ಟಿಸಿದ್ದಾನೆ. ನಂತರ ನಂಜುಂಡಿ ಅವರ ಆಪ್ತ ಸಹಾಯಕನನ್ನಾಗಿ ನೇಮಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್) ಪತ್ರ ಬರೆದಿದ್ದಾರೆ.

ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ ಕೆಲಸ ಮಾಡಿರುವುದಾಗಿ ನಕಲಿ ಹಾಜರಾತಿ ಪತ್ರ ಸೃಷ್ಟಿಸಿದ್ದ ರವಿಕುಮಾರ್ ಬ್ಯಾಂಕ್ ಖಾತೆಗೆ ಏಳು ತಿಂಗಳ ಸಂಬಳವಾಗಿ ಸುಮಾರು 2.1 ಲಕ್ಷ ರೂ. ಹಣವನ್ನು ಅಧಿಕಾರಿಗಳು ವರ್ಗಾಯಿಸಿದ್ದಾರೆ. ನಂಜುಂಡಿ ಅವರು ಇತ್ತೀಚೆಗಷ್ಟೇ ಮಹಾಂತೇಶ್ ಎಂಬುವವರನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಂಡಿದ್ದರು. 

ಮಹಾಂತೇಶ್ ತಮ್ಮ ಗುರುತಿನ ಚೀಟಿಯನ್ನು ಪಡೆದುಕೊಳ್ಳಲು ವಿಕಾಸ ಸೌಧಕ್ಕೆ ತೆರಳಿದ್ದಾಗ, ಈಗಾಗಲೇ ಒಬ್ಬರು ನಂಜುಂಡಿ ಅವರ ಆಪ್ತ ಸಹಾಯಕನೆಂದು ಗುರುತಿನ ಚೀಟಿ ಹಾಗೂ ಪಾಸ್ ಪಡೆದುಕೊಂಡಿದ್ದು, ಸಂಬಳವನ್ನು ಕೂಡ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. 

ಇದನ್ನು ನಂಜುಂಡಿ ಅವರಿಗೆ ತಿಳಿಸಿದಾಗ ವಂಚಕನ ಕೃತ್ಯ ಬೆಳಕಿಗೆ ಬಂದಿದೆ. "ಮೂಡ"ಕ್ಕೆ ಸುಳ್ಳು ಮಾಹಿತಿ ನೀಡಿ ಸರ್ಕಾರಿ ನೌಕರ ಪಡೆದಿರುವ ಸೈಟುಗಳೆಷ್ಟು ಗೊತ್ತೆ?  ರವಿಕುಮಾರ್ ಹೇಗೆ ನನ್ನ ಹೆಸರು ಮತ್ತು ದಾಖಲೆಗಳನ್ನು ನಕಲು ಮಾಡಿ ಸಂಬಳ ಪಡೆದಿದ್ದಾನೋ ನನಗೆ ಗೊತ್ತಿಲ್ಲ. ಒಳಗಿನವರೇ ಕೆಲವರು ಆತನಿಗೆ ಸಹಾಯ ಮಾಡಿರಬಹುದು ಎಂದು ಆರೋಪಿಸಿದ್ದಾರೆ. 
 

SCROLL FOR NEXT