ರಾಜ್ಯ

ಪೌರತ್ವ ಕಾಯ್ದೆ ಪ್ರತಿಭಟನೆ: ವಿಧ್ವಂಸಕ ಕೃತ್ಯದ ಹಲವು ವಿಡಿಯೊ ಬಿಡುಗಡೆ ಮಾಡಿದ ಮಂಗಳೂರು ಪೊಲೀಸರು 

Sumana Upadhyaya

ಮಂಗಳೂರು; ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಗೋಲಿಬಾರ್ ನಡೆಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಮಂಗಳೂರು ವಿಭಾಗ ಪೊಲೀಸರು ಮಂಗಳವಾರ ಘಟನೆಗೆ ಸಂಬಂಧಿಸಿದಂತೆ ವಿಡಿಯೊ ಬಿಡುಗಡೆ ಮಾಡಿದ್ದಾರೆ. 


ಅದರಲ್ಲಿ ಪ್ರತಿಭಟನಾಕಾರರು ಆಕ್ರೋಶದಿಂದ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶ ಮಾಡಿರುವ ವಿಡಿಯೊವನ್ನು ಮಂಗಳೂರು ಪೊಲೀಸರು ಸೋಷಿಯಲ್ ಮೀಡಿಯಾ ಮೂಲಕ ಬಿಡುಗಡೆ ಮಾಡಿದ್ದು ಅದು ಮಾಧ್ಯಮಗಳಲ್ಲಿ ಇದೀಗ ವ್ಯಾಪಕ ಸುದ್ದಿಯಾಗುತ್ತಿದೆ.
ಪ್ರತಿಭಟನೆಯ ಇನ್ನೊಂದು ಮುಖವೆಂಬ ರೀತಿಯ 10ಕ್ಕೂ ಹೆಚ್ಚು ವಿಡಿಯೊ ಮತ್ತು ಟೆಲಿಫೋನ್ ಸಂಭಾಷಣೆಗಳನ್ನು ಪೊಲೀಸರು ಬಿಡುಗಡೆಮಾಡಿದ್ದಾರೆ.


ವಿಡಿಯೊದಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ರಸ್ತೆಗಳನ್ನು ತಡೆದಿದ್ದಾರೆ. ಕೆಲವು ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಹಾಳುಗೆಡವಿದ್ದಾರೆ. ವಿಡಿಯೊಗಳು ಮಾತ್ರವಲ್ಲದೆ ಅಶ್ಲೀಲವಾಗಿ ಮಾತನಾಡಿರುವ ಆಡಿಯೊಗಳನ್ನು ಸಹ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಕೆಲವು ವಿಡಿಯೊಗಳಲ್ಲಿ ಪ್ರತಿಭಟನಾಕಾರರು ತಮ್ಮ ಗುರುತು ಸಿಗಬಾರದೆಂದು ಬಟ್ಟೆಗಳಿಂದ ಮುಖ ಮುಚ್ಚಿಕೊಂಡಿದ್ದಾರೆ.


ಸಾರ್ವಜನಿಕರಲ್ಲಿ ಘಟನೆಗೆ ಸಂಬಂಧಿಸಿದಂತೆ ವಿಡಿಯೊಗಳಿದ್ದರೆ ಹಂಚಿಕೊಳ್ಳಿ, ನಮಗೆ ನೀಡಿ ಎಂದು ಆಯುಕ್ತ ಪಿ ಎಸ್ ಹರ್ಷ ಮನವಿ ಮಾಡಿಕೊಂಡಿದ್ದರು. ಅದರಂತೆ ಸಾರ್ವಜನಿಕರು ನೀಡಿರುವ ವಿಡಿಯೊ ಇದಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಆದರೆ ಇದು ಪೊಲೀಸರು ಒಂದು ಭಾಗದ ವಿಡಿಯೊ ಮಾತ್ರ ತೋರಿಸುತ್ತಿದ್ದಾರೆ, ಅಲ್ಲಿ ವಾಸ್ತವವಾಗಿ ನಡೆದ ಘಟನೆಯೇ ಬೇರೆ ಎಂದು ಮುಸ್ಲಿಂ ಸಂಘಟನೆಗಳು ಮತ್ತು ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

SCROLL FOR NEXT