ಸುರೇಶ್ ಕುಮಾರ್ 
ರಾಜ್ಯ

ಸಕಾಲ ಮಾದರಿಯಲ್ಲೇ ಆರ್.ಟಿ.ಐ. ಸೇವೆಗಳೂ ಆನ್-ಲೈನ್ ನಲ್ಲಿ ಲಭ್ಯ: ಸಚಿವ ಸುರೇಶ್ ಕುಮಾರ್ 

ನಾಗರೀಕರಿಗೆ ನಿಗದಿತ ಅವಧಿಯಲ್ಲಿ ಸೇವೆ ದೊರೆಯುವಂತೆ ಮಾಡಲು 'ಸಕಾಲ'ಸೇವೆಗಳನ್ನು ಆನ್  ಲೈನ್ ಗೊಳಿಸಿದ ಮಾದರಿಯಲ್ಲೇ ಮಾಹಿತಿ ಹಕ್ಕು ಅಧಿನಿಯಮ-ಆರ್.ಟಿ.ಐ. ಸೇವೆಗಳನ್ನೂ ಸಹ ಆನ್-ಲೈನ್ ವ್ಯವಸ್ಥೆಗೆ ತರುವುದಾಗಿ  ಪ್ರಾಥಮಿಕ, ಪ್ರೌಢಶಿಕ್ಷಣ, ಕಾರ್ಮಿಕ ಮತ್ತು ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರು: ನಾಗರೀಕರಿಗೆ ನಿಗದಿತ ಅವಧಿಯಲ್ಲಿ ಸೇವೆ ದೊರೆಯುವಂತೆ ಮಾಡಲು 'ಸಕಾಲ'ಸೇವೆಗಳನ್ನು ಆನ್  ಲೈನ್ ಗೊಳಿಸಿದ ಮಾದರಿಯಲ್ಲೇ ಮಾಹಿತಿ ಹಕ್ಕು ಅಧಿನಿಯಮ-ಆರ್.ಟಿ.ಐ. ಸೇವೆಗಳನ್ನೂ ಸಹ ಆನ್-ಲೈನ್ ವ್ಯವಸ್ಥೆಗೆ ತರುವುದಾಗಿ  ಪ್ರಾಥಮಿಕ, ಪ್ರೌಢಶಿಕ್ಷಣ, ಕಾರ್ಮಿಕ ಮತ್ತು ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಬಿಬಿಎಂಪಿ ವ್ಯಾಪ್ತಿಯ ಅಧಿಕಾರಿ ಮತ್ತು ನೌಕರರಿಗೆ ಸಕಾಲ ಸೇವೆಗಳ ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಸೇವೆಗಳಲ್ಲಿ ಅನಗತ್ಯ ವಿಳಂಬ ತಪ್ಪಿಸುವ ಸಲುವಾಗಿ ಸಕಾಲ ಸೇವೆಯನ್ನು ಆನ್-ಲೈನ್ ಜಾಲಕ್ಕೆ ತರಲಾಗಿದೆ. ಇದೇ ಮಾದರಿಯಡಿ  ಮಾಹಿತಿ ಹಕ್ಕು ಕಾಯ್ದೆಯಡಿ ಕೇಳುವ ವಿವರಗಳನ್ನು ಸಹ ಆನ್-ಲೈನ್ ವ್ಯವಸ್ಥೆಗೆ ಒಳಪಡುವಂತೆ ಮಾಡಲು ಒಂದು ಹೊಸ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದರು. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕಾಲ ವ್ಯಾಪ್ತಿಗೆ ಒಳಗಾದ ಸೇವೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡದಿರುವ ಪ್ರಕರಣಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕಾಲ ಸೇವೆಗೆ ಬೆಂಗಳೂರು ನಗರದ ಒಟ್ಟು ಜನಸಂಖ್ಯೆಯ ಶೇ.0.01ರಷ್ಟು ಜನರಿಂದಲೂ ಅರ್ಜಿಗಳು ಸಹ ಬರುವುದಿಲ್ಲ. ನಾವು ಇಷ್ಟನ್ನೂ ಸಹ ಸಮರ್ಪಕವಾಗಿ ವಿಲೇವಾರಿ ಮಾಡದಿದ್ದರೆ ಕರ್ತವ್ಯ ಲೋಪವಾಗುತ್ತದೆ. ಸಣ್ಣ ಕೆಲಸ ಮಾಡದ ನಾವು ಕೋಟ್ಯಂತರ ಜನರಿಗೆ ಎಲ್ಲ ಸೇವೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಬಿಬಿಎಂಪಿ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು. 

ಯಾವುದೇ ನೌಕರರಾಗಲೀ ತಾವು ಕರ್ತವ್ಯನಿರ್ವಹಿಸುತ್ತಿರುವ ಇಲಾಖೆ ಕುರಿತು ಸಾರ್ವಜನಿಕರಲ್ಲಿ ಯಾವ ಅಭಿಪ್ರಾಯ ಇದೆ ಎಂಬ ಬಗ್ಗೆ ಅರಿವು ಹೊಂದಿರಬೇಕು. ನಾವು ಈಗ ಸರ್ಕಾರಿ ನೌಕರರಾಗಿರಬಹುದು, ನಿವೃತ್ತರಾದ ನಂತರ ಸಾಮಾನ್ಯ ನಾಗರೀಕರಾಗುತ್ತೇವೆ. ಹೀಗಾಗಿ ನಾಳೆ ನಮಗೆ ಯಾವ ರೀತಿಯ ಸೇವೆ ದೊರೆಯಬಹುದು, ನಮ್ಮನ್ನು ಆಗ ಅಧಿಕಾರಿಗಳು ಹೇಗೆ ನಡೆಸಿಕೊಳ್ಳಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಬೇಕು ಎಂದು ಸುರೇಶ್ ಕುಮಾರ್ ಕಿವಿಮಾತು ಹೇಳಿದರು.

ಸಕಾಲ ಸೇವೆ ವಿಚಾರದಲ್ಲಿ ದೇಶದ ಎಲ್ಲ ರಾಜ್ಯಗಳು ನಮ್ಮತ್ತಲೇ ನೋಡುತ್ತಿವೆ. ನಮ್ಮ ಸಕಾಲ ಮಿಷನ್ ಯೋಜನೆ ಸೇವಾ ಪ್ರಕ್ರಿಯೆ ಕುರಿತು ಇಡೀ ದೇಶದಲ್ಲಿ ಉತ್ತಮ ಹೆಸರಿದೆ. ಆದರೆ ಅದನ್ನು ನಾವು ಇನ್ನೂ ಸಮರ್ಪಕವಾಗಿ ಅನುಷ್ಠಾನ ಮಾಡುವುದರಿಂದ ನಮ್ಮ ಜನರಿಗೆ ಹೆಚ್ಚಿನ ಸೇವೆ ದೊರೆಯಲಿದೆ ಎಂದರು.

ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿದ ಜಿಲ್ಲೆ ಮತ್ತು ತಾಲೂಕುಗಳಿಗೆ ರಾಜ್ಯಮಟ್ಟದಲ್ಲಿ ಪ್ರತಿ ತಿಂಗಳೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅದರಂತೆಯೇ ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುವುದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವ ಅಧಿಕಾರಿ ನಿಗದಿತ ಸಮಯದಲ್ಲಿ ಅರ್ಜಿ ವಿಲೇವಾರಿಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಾರೋ ಅವರಿಗೆ ಈ ಪ್ರಶಸ್ತಿ ದೊರೆಯಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು. 

ನಾನೂ ಸಹ ಬಿಬಿಎಂಪಿ ಕುಟುಂಬಕ್ಕೆ ಸೇರಿದವನಾಗಿರುವುದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕಾಲ ಸೇವೆಗಳು ಶೇ.100ರಷ್ಟು ಪರಿಣಾಮಕಾರಿಯಾಗಿ ದೊರೆಯಬೇಕು ಎಂಬುದು ನನ್ನ ಆಶಯ. ಸಕಾಲ ವ್ಯಾಪ್ತಿಯ ಇನ್ನೊಂದು ಸೇವೆಯಾದ 'ಜನಸೇವಕ' ಯೋಜನೆ ಪ್ರಸ್ತುತ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದು, ಸದ್ಯದಲ್ಲೇ ಬಿಬಿಎಂಪಿ ವ್ಯಾಪ್ತಿಯ ಇನ್ನೂ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು. 

ಬಿಬಿಎಂಪಿ ಅಪರ ಆಯುಕ್ತರಾದ ಅನ್ಬುಕುಮಾರ್, ಸಕಾಲ ಅಪರ ಮಿಷನ್ ನಿರ್ದೇಶಕ-1 ಸುನಿಲ್ ಪಂವಾರ್ ಭಾಗವಹಿಸಿದ್ದರು. ಸಕಾಲ ಅಪರ ಮಿಷನ್ ನಿರ್ದೇಶಕ-2 ಬಿ.ಎನ್. ವರಪ್ರಸಾದ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಬಿಎಂಪಿ ಅಧಿಕಾರಿಗಳು, ನೌಕರರು ಸೇವೆ ಒದಗಿಸುವಲ್ಲಿ ಮತ್ತು ಅರ್ಜಿ ವಿಲೇವಾರಿಗಳಲ್ಲಿನ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರಗಳನ್ನು ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT