ರಾಜ್ಯ

ಕರ್ನಾಟಕ ಸೇರಿ ಉತ್ತರ ಭಾರತದಲ್ಲಿ ಮಹಾ ಕಂಕಣ ಸೂರ್ಯಗ್ರಹಣ ಆರಂಭ

Manjula VN

ಬೆಂಗಳೂರು: ಅತ್ಯಂತ ಅಪರೂಪವಾದ ಕಂಕಣ ಸೂರ್ಯಗ್ರಹಣ ಗುರುವಾರ ಘಟಿಸಿದ್ದು, ಭಾರತದಲ್ಲಿ ಗೋಚರಗೊಂಡಿದೆ. ಬೆಳಿಗ್ಗೆ 8.04ಕ್ಕೆ ಆರಂಬವಾಗಿರುವ ಸೂರ್ಯಗ್ರಹಣ ಬೆಳಿಗ್ಗೆ 11.11ಕ್ಕೆ ಅಂತ್ಯಗೊಳ್ಳಲಿದೆ. 

ದೇಶದಲ್ಲಿಯೇ ಅತೀ ಹೆಚ್ಚು ಸ್ಪಷ್ಟವಾಗಿ ಗ್ರಹಣ ಗೋಚರಿಸಲಿರುವುದು ಕರ್ನಾಟಕದಲ್ಲಿ ಹಾಗೂ ಅದರಲ್ಲೂ ವಿಶೇಷವಾಗಿ ಮೈಸೂರು, ಮಂಗಳೂರು ಹಾಗೂ ಮಡಿಕೇರಿಯಲ್ಲಿ ಎಂಬುದು ವಿಶೇಷ. ದೇಶದ ಇತರ ಭಾಗಗಳಿಗೆ ಹೋಲಿಸಿದರೆ ಸೂರ್ಯನು ಬಳೆಯಂತೆ (ಕಂಕಣ) ಸ್ಪಷ್ಟವಾಗಿ ಕಾಣಲಿರುವುದು ಇಲ್ಲಿ ಮಾತ್ರ. 

ಸೂರ್ಯ ಬಳೆ ರೀತಿಯಲ್ಲಿ ಕಾಣುವ ಸಮಯ 9.24ರಿಂದ 9.29ರವರೆಗೆ ಇರಲಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. 

ಭೂಮಿ, ಸೂರ್ಯ ಹಾಗೂ ಚಂದ್ರನ ನಡುವಿನ ಅಂತರಗಳ ಪ್ರಕಾರ ಸೂರ್ಯನ ಕೋನೀಯ ಗಾತ್ರವು ಚಂದ್ರನದಕ್ಕಿಂತ ದೊಡ್ಡದಾಗಿರುತ್ತದೆ. ಹಾಗಾಗಿ ಸೂರ್ಯ ಬಳೆಯಂತೆ ಗೋಚರಿಸುತ್ತಾನೆ. ಪೂರ್ಣ ಛಾಯಾಶಂಕುವನ್ನು ದಾಟಿದ ಪ್ರದೇಶದಲ್ಲಿರುವ ಜನರಿಗೆ ಕಂಕಣ ಸೂರ್ಯಗ್ರಹಣ ಕಾಣುತ್ತದೆ.

ಈ ಅಪರೂಪದ ಖಗೋಳ ಕೌತುಕ ವಿಶ್ವದಲ್ಲೆಡೆ ಒಂದೇ ರೀತಿ ಕಾಣಿಸುವುದಿಲ್ಲ. ಭಾರತದಲ್ಲೂ ತಮಿಳುನಾಡು, ಕೇರಳ, ಕರ್ನಾಟಕ ಭಾಗಗಳಲ್ಲಷ್ಟೇ ಕಂಕಣ ಸೂರ್ಯಗ್ರಹಣದ ದರ್ಶನ ಸಾಧ್ಯವಿದೆ. ಉಳಿದೆಡೆ ಭಾಗಶಃ ಸೂರ್ಯಗ್ರಹಣದ ದರ್ಶನ ಸಿಗಲಿದೆ. 

ಏನಿದೂ ಕಂಕಣ ಸೂರ್ಯಗ್ರಹಣ?
ಸೂರ್ಯ, ಭೂಮಿಯ ಮಧ್ಯೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಗ್ರಹಣಗಲಳ್ಲಿ ಪೂರ್ಣ, ಪಾರ್ಶ್ವ, ಕಂಕಣ ಎಂಬ 3 ವಿಧಗಳಿವೆ. ಕಂಕಣ ಗ್ರಹಣದಲ್ಲಿ ಸೂರ್ಯನನ್ನು ಚಂದ್ರ ಪೂರ್ಣವಾಗಿ ಮರೆ ಮಾಡುವುದಿಲ್ಲ. ಗ್ರಹಣವಾದಾಗ ಚಂದ್ರನ ಸೂತ್ತಲೂ ಬೆಳಕು ತೂರಿ ಬಂದು ಹೊಳೆಯುವ ಬಂಗಾರದ ಬಳೆಯಾಕಾರದಲ್ಲಿ ಸೂರ್ಯ ಗೋಚರಿಸುತ್ತಾನೆ. ಇದೇ ಕಂಕಣ ಸೂರ್ಯಗ್ರಹಣ. 

ಈ ಗ್ರಹಣವು ಭಾರತದ ಹಲವು ಭಾಗಗಲಲ್ಲಿ ಗೋಚರಿಸಲಿದೆ. ಮಂಗಳೂರು, ಮಡಿಕೇರಿ, ಮೈಸೂರಿನಲ್ಲಿ ಹಾಗೂ ತಮಿಳುನಾಡಿನ ಊಟಿ, ಕೊಯಮತ್ತೂರು, ಮದುರೈ, ಕೇರಳದ ಕೆಲವು ಭಾಗಗಳಲ್ಲಿ ಕಂಕಣವಾಗಿ ಕಾಣಲಿದ್ದು, ಉಳಿದೆಡೆ ಪಾರ್ಶ್ವಗ್ರಹಣವಾಗಲಿದೆ. ಸೌದಿ ಸೇರಿ ಕೊಲ್ಲಿ ರಾಷ್ಟ್ರಗಳು, ಲಂಕಾ, ಮಲೇಶಿಯಾ, ಇಂಡೋನೇಷ್ಯಾ, ಸಿಂಗಾಪುರ, ಆಫ್ರಿಕಾ ದೇಶಗಳಲ್ಲಿ ಕೂಡ ಕಂಕಣ ಸೂರ್ಯಗ್ರಹಣ ಕಾಣಸಿಗಲಿದೆ. 

SCROLL FOR NEXT