ಗದಗ: ರಾಜ್ಯಾದ್ಯಂತ ಸಂಪೂರ್ಣವಾಗಿ ಮದ್ಯ ಮಾರಾಟ ನಿಷೇಧಿಸುವಂತೆ ಇತ್ತೀಚೆಗೆ ಮಹಿಳಾ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದರು, ಆದರೆ ಸಂಪೂರ್ಣ ಮದ್ಯನಿಷೇಧ ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದರು.
ಆದರೆ ಗದಗದಿಂದ ಸುಮಾರು 20 ಕಿಮೀ ದೂರದಲ್ಲಿರುವ ಲಿಂಗದಾಳು ಗ್ರಾಮದಲ್ಲಿ ಕಳೆದ 70 ವರ್ಷಗಳಿಂದ ಮದ್ಯ ಮಾರಾಟ ಸಂಪೂರ್ಣ ನಿಷೇಧಗೊಂಡಿದೆ.
ಸುಮಾರು 4ಸಾವಿರ ಮನೆಗಳಿರುವ ಈ ಗ್ರಾಮದಲ್ಲಿ ಹುಡುಕಿದರೂ ಒಂದೇ ಒಂದು ಮದ್ಯಮಾರಾಟ ಅಂಗಡಿಯಿಲ್ಲ, ಹೀಗಾಗಿ ಇಲ್ಲಿ ಕುಡಿದು ಹೊಡೆದಾಡುವ ಸನ್ನಿವೇಶ ಇಲ್ಲವೇ ಇಲ್ಲ,
ಒಂದು ವೇಳೆ ಯಾರಾದರೂ ಕುಡಿದು ಸಿಕ್ಕಿಬಿದ್ದರೇ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಊರಿನ ಹಿರಿಯರು ಸೇರಿ ತಕ್ಕ ಶಿಕ್ಷೆ ನೀಡುತ್ತಾರೆ, ಯಾರಾದರೂ ಕುಡಿದು ಗ್ರಾಮ ಪ್ರವೇಶಿಸಿದರೇ, ಅಥವಾ ಪಕ್ಕದ ಊರಿಗೆ ತೆರಳಿ ಅಲ್ಲಿ ಕುಡಿದು ವಾಪಸ್ ಊರಿಗೆ ಬಂದರೇ ಅಂಥವರನ್ನು ಅಂದು ಗ್ರಾಮ ಪ್ರವೇಶಿಸಲು ಅವಕಾಶ ನೀಡುವುದಿಲ್ಲ.
ಊರಿನಲ್ಲಿ ಕುಡಿತದಿಂದ ಉಂಟಾದ ಮಾರಣಾಂತಿಕ ಜಗಳದಿಂದಾಗಿ ಈ ನಿಯಮ ಜಾರಿಗೆ ತರಲಾಗಿದೆ, ಸಾರಾಯಿ ಮತ್ತು ಟೀ ಅಂಗಡಿಗಳಿಗೆ ಗ್ರಾಮಸ್ಥರು ಬೆಂಕಿ ಹಚ್ಚಿದ್ದರು,ಅಂದಿನಿಂದ ಹಿರಿಯರು ಸಾರಾಯಿ ವಿರೋಧಿ ನೀತಿಯನ್ನು ಜಾರಿಗೆ ತಂದಿದ್ದಾರೆ.ಹೀಗಾಗಿ ಈ ಊರಿನಲ್ಲಿ ಅಪರಾಧ ಪ್ರಕರಣ ಕಡಿಮೆಯಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನವೇ ನಮ್ಮ ಹಿರಿಯರು ಈ ಗ್ರಾಮದಲ್ಲಿ ಸಾರಾಯಿ ಮಾರಾಟ ನಿಷೇಧ ನಿಯಮ ಜಾರಿಗೆ ತಂದಿದ್ದರು ಎಂದು ಗ್ರಾಮಸ್ಥ ಶಿವಪ್ಪ ಎಂಬುವರು ಹೇಳಿದ್ದಾರೆ.
ನಮ್ಮ ಊರಿನ ಯುವಕರನ್ನು ಹೆಣ್ಣುಮಕ್ಕಳು ಸಂತೋಷದಿಂದ ಮದುವೆಯಾಗುತ್ತಾರೆ,ನಾನು ಈ ಊರಿಗೆ ಮದುವೆಯಾಗಿ ಬಂದದ್ದು ನನ್ನ ಅದೃಷ್ಟ, ನನ್ನ ಪತಿ ಸಾಮಾಜಿಕ ಕಾರ್ಯಕರ್ತ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಾಂದ್ಬಿ ದೊಡ್ಡಮನಿ ಹೇಳಿದ್ದಾರೆ.
ನಮ್ಮ ಗಂಡಂದಿರು ಕುಡಿದು ಮನೆಗೆ ಬರುತ್ತಾರೆ ಎಂಬ ಭಯ ಆತಂಕ ನಮಗಿಲ್ಲ ಎಂದು ಶೇಕವ್ವ ಕವಲೂರು ಎಂಬ ಗೃಹಿಣಿ ತಿಳಿಸಿದ್ದಾರೆ,
ತಾವು ಬಾಲಕನಾಗಿದ್ದ ಸಮಯದಲ್ಲಿ ನಡೆದ ಭೀಕರ ಘಟನೆ ಬಗ್ಗೆ, ಸಾರಾಯಿ ಸೇವಿಸಿ ನಡೆದ ದುರಂತದ ಬಗ್ಗೆ ಮರಳುಸಿದ್ದಪ್ಪ (88) ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ. ಕೆಲ ವರ್ಷಗಳ ಹಿಂದೆ ಕೆಲವರು ಇಲ್ಲಿ ಮದ್ಯ ಮಾರಾಟ ಮಾಡಲು ಪ್ರಯತ್ನಿಸಿದರು, ಆದರೆ ಖಡಕ್ ಎಚ್ಚರಿಕೆಯ ನಂತರ ಮತ್ತೆ ಅಂಥ ಘಟನೆಗಳು ನಡೆದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos