ರಾಜ್ಯ

ದೇವೇಗೌಡರು ಆರೋಗ್ಯವಾಗಿದ್ದಾರೆ, ಏನೂ ಸಮಸ್ಯೆಯಿಲ್ಲ; ಜೆಡಿಎಸ್

Sumana Upadhyaya

ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಆರೋಗ್ಯವಾಗಿದ್ದಾರೆ, ಯಾವುದೇ ರೀತಿಯ ಸಮಸ್ಯೆಯಿಲ್ಲ ಎಂದು ಜೆಡಿಎಸ್ ಸ್ಪಷ್ಟನೆ ನೀಡಿದೆ.

ಆಕಸ್ಮಿಕವಾಗಿ ಬಾತ್ ರೂಂ ನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಜಾರಿ ಬಿದ್ದ ಪರಿಣಾಮ ಅವರ ಬಲಗಾಲಿಗೆ ಪೆಟ್ಟಾಗಿದೆ. ಪದ್ಮನಾಭನಗರದಲ್ಲಿರುವ ಅವರ ನಿವಾಸದಲ್ಲಿ ಮೊನ್ನೆ ರಾತ್ರಿ ಈ ಘಟನೆ ನಡೆದಿದ್ದು, ಅವರ ಬಲಗಾಲಿಗೆ ಗಾಯವಾಗಿದೆ ಎಂದು ನಿನ್ನೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಜೆಡಿಎಸ್ ವಕ್ತಾರ ರಮೇಶ್ ಬಾಬು, ದೇವೇಗೌಡರು ತಮ್ಮ ಬೆಂಗಳೂರು ನಿವಾಸದಲ್ಲಿದ್ದು ಪಕ್ಷದ ಕಾರ್ಯಕರ್ತರು ಅವರನ್ನು ಭೇಟಿ ಮಾಡುತ್ತಿದ್ದಾರೆ. ಅವರು ಆರೋಗ್ಯವಾಗಿದ್ದು ಎಂದಿನ ಕೆಲಸದಲ್ಲಿ ತೊಡಗಿದ್ದಾರೆ. ಅವರ ಆರೋಗ್ಯದ ಬಗ್ಗೆ ನಿನ್ನೆಯಿಂದ ಕೇಳಿಬರುತ್ತಿರುವ ವದಂತಿಗಳು ಸುಳ್ಳು ಮತ್ತು ಆಧಾರರಹಿತ ಎಂದು ಹೇಳಿದ್ದಾರೆ.

ಮೊನ್ನೆ ಶುಕ್ರವಾರ ದೆಹಲಿಯಿಂದ ಬೆಂಗಳೂರಿಗೆ ವಾಪಸ್ಸಾಗಿದ್ದ ದೇವೇಗೌಡರು ಅಂದು ರಾತ್ರಿ ಬಾತ್ ರೂಂಗೆ ಹೋಗಿದ್ದವರು ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು. ತೀವ್ರ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ವೈದ್ಯರ ತಂಡ ಪರೀಕ್ಷಿಸಿ ಚಿಕಿತ್ಸೆ ನೀಡಿತು. ಅಲ್ಲಿಂದ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮೂಳೆತಜ್ಞ ಡಾ ಚಂದ್ರಶೇಖರ್ ಬಳಿ ಚಿಕಿತ್ಸೆ ಕೊಡಿಸಲಾಯಿತು.

ಕೆಲವು ಮಾಧ್ಯಮಗಳಲ್ಲಿ ವರದಿಯಾದಂತೆ ಬಾತ್ ರೂಂನಲ್ಲಿ ದೇವೇಗೌಡರು ಬೀಳಲಿಲ್ಲ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ಡಾ ಸಿ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.
ಜಯದೇವ ಆಸ್ಪತ್ರೆಗೆ ಬಂದು ಡಾ ಚಂದ್ರಶೇಖರ್ ಬಳಿ ಚಿಕಿತ್ಸೆ ಪಡೆದು ಎಂಆರ್ ಐ ಸ್ಕಾನ್ ಮಾಡಿಸಿಕೊಂಡಿದ್ದಾರೆ. ಅವರ ಕಾಲಿನಲ್ಲಿ ನೋವು ಇದೆ. ಫಿಸಿಯೊಥೆರಪಿ ಮಾಡಿಸಿಕೊಂಡು ನೋವಿಗೆ ಔಷಧ ಪಡೆದು ಕೆಲ ದಿನಗಳವರೆಗೆ ವಿಶ್ರಾಂತಿ ಹೇಳಿದ್ದೇವೆ ಎಂದು ತಿಳಿಸಿದರು.

SCROLL FOR NEXT