ಮೈಸೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, 3 ಪಾದ್ರಿಗಳ ವಿರುದ್ಧ ಪೋಕ್ಸೋಕಾಯ್ದೆಯಡಿ ಪ್ರಕರಣ
ಮೈಸೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲಿ ಮಂಗಳೂರು ಮೂಲದ ಮೂವರು ಪಾದ್ರಿಗಳ ವಿರುದ್ಧ ಮೈಸೂರು ನರಸಿಂಹ ರಾಜ ಠಾಣೆ ಪೋಲೀಸರು ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಿಸಿಕೊಂಡಿದ್ದಾರೆ.ಎಸ್ಸಿ / ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಜಾತಿ ಹೆಸರಿನಲ್ಲಿ ನಿಂದನೆ ಹಾಗೂ ಅಪಹರಣ ಪ್ರಕರಣದೊಡನೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಅವರ ವಿರುದ್ಧ ದೂರು ದಾಖಲಾಗಿದೆ.
ಮೈಸೂರು ಮೂಲದ ಸಂತ್ರಸ್ಥ ಬಾಲಕಿಯ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಹೈಕೋರ್ಟ್ ನೀಡಿದ ನಿರ್ದೇಶನದ ಅನುಸಾರ ಈ ಕ್ರಮ ತೆಗೆದುಕೊಳ್ಲಲಾಗಿದೆ.ಈ ಸಂಬಂಧ ಸ್ಥಳೀಯ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆರೋಪಿಗಳು ಮಂಗಳೂರು ಬಲ್ಮಠದ ನಿವಾಸಿಗಳಾಗಿದ್ದು ಸೆಬಾಸ್ಟಿಯನ್, ಜೋಶುವಾ ಅಮನ್ ಹಾಗೂ ಬೆನ್ನೆಟ್ ಅಮನ್ ಎಂದು ಗುರುತಿಸಲಾಗಿದೆ.
16 ವರ್ಷದ ಬಾಲಕಿಯ ತಾಯಿಯ ದೂರಿನಂತೆ ಮಂಗಳೂರಿನ ನರ್ಸಿಂಗ್ ಹೋಮ್ನಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ್ದ ಈ ಮೂವರು ಕಳೆದ ವರ್ಷ ನವೆಂಬರ್ ನಲ್ಲಿ ಆಕೆಯನ್ನು ತಮ್ಮೊಡನೆ ಕರೆದೊಯ್ದಿದ್ದಾರೆ.ಮನೆ ನಿರ್ಮಾಣದಲ್ಲಿ ನಿರತವಾಗಿದ್ದ ಬಾಲಕಿಯ ತಾಯಿಗೆ ಆ ಮೂವರೂ 1 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿಯೂ ಭರವಸೆ ನೀಡಿದ್ದಾರೆ.
ಆದರೆ ಮಂಗಳೂರಿಗೆ ಕರೆದೊಯ್ದ ಬಳಿಕ ಆಕೆಯಿಂದ ತಮ್ಮ ಮನೆಗೆಲಸಗಳನ್ನು ಮಾಡಿಸಿಕೊಂಡಿದ್ದಲ್ಲದೆ ಡಿಸೆಂಬರ್ ಮಧ್ಯದ ಅವಧಿಯಿಂದಲೂ ಲೈಂಗಿಕ ಕಿರುಕುಳ ನೀಡುತ್ತಾ ಬಂದಿದ್ದಾರೆ.ಅವರು ಬಾಲಕಿಯನ್ನು ಗೃಹ ಬಂಧನ'ದಲ್ಲಿ ಇಟ್ಟುಕೊಂಡಿದ್ದರು ಮತ್ತು ಯಾರಿಗೂ ಈ ಕೃತ್ಯದ ಬಗ್ಗೆ ಮಾಹಿತಿ ನೀಡಬಾರದೆಂದು ಬೆದರಿಕೆ ಹಾಕಿದ್ದರು.ಇಷ್ಟೇ ಅಲ್ಲದೆ ಜಾತಿ ಹೆಸರಿನಲ್ಲಿ ಅವಳಿಗೆ ನಿಂದನೆಯನ್ನೂ ಮಾಡಿದ್ದಾರೆ ಎಂದು ಆಕೆ ದೂರಿನಲ್ಲಿ ಹೇಳಿದ್ದಾರೆ.
ಸಧ್ಯ ಪೋಲೀಸರು ಆರೋಪಿಗಳ ಪತ್ತೆಗೆ ಕ್ರಮ ತೆಗೆದುಕೊಂಡಿದ್ದಾರೆ.