ರಾಜ್ಯ

ಶಾಸಕರ ಕುದುರೆ ವ್ಯಾಪಾರ ಆರೋಪ; ಬಿಎಸ್ ವೈ ಸೇರಿದಂತೆ ಹಲವು ನಾಯಕರ ವಿರುದ್ಧ ದೂರು ದಾಖಲು

Srinivasamurthy VN
ಬೆಂಗಳೂರು: ಬಜೆಟ್ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಸಿಡಿಸಿರುವ ಆಪರೇಷನ್ ಕಮಲದ ಬಾಂಬ್ ನಡುವೆಯೇ ಬಿಎಸ್ ವೈ ಮತ್ತು ಇತರೆ ಬಿಜೆಪಿ ನಾಯಕರ ವಿರುದ್ಧ ವಕೀಲರೊಬ್ಬರು ದೂರು ಸಲ್ಲಿಕೆ ಮಾಡಿದ್ದಾರೆ.

ಆರ್ ಎಲ್ ಎನ್ ಮೂರ್ತಿ ಎಂಬ ವಕೀಲರು ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ದೂರು ಸಲ್ಲಿಕೆ ಮಾಡಿದ್ದು, ಯಡಿಯೂರಪ್ಪ ಅವರ ವಿರುದ್ಧ ಮಾತ್ರವಲ್ಲದೇ ಬಿಜೆಪಿಯ ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ ಮತ್ತು ಇತರರ ವಿರುದ್ಧ ಶಾಸಕರ ಕುದುರೆ ವ್ಯಾಪಾರ, ಭ್ರಷ್ಟಾಚಾರ, ಹಣದ ಆಮಿಷ ಒಡ್ಡಿ ಶಾಸಕರ ಸೆಳೆಯುವ ಪ್ರಯತ್ನ ಸೇರಿದಂತೆ ಹಲವು ದೂರುಗಳನ್ನು ಸಲ್ಲಿಕೆ ಮಾಡಿದ್ದಾರೆ.

ಇಂದು ಬೆಳಗ್ಗೆಯಷ್ಟೇ ಸುದ್ದಿಗೋಷ್ಠಿ ಕರೆದಿದ್ದ ಸಿಎಂ ಕುಮಾರಸ್ವಾಮಿ ಬಿಜೆಪಿ ಮುಖಂಡರು ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ದೇವದುರ್ಗ ಐಬಿಯಲ್ಲಿ ಜೆಡಿಎಸ್ ಶಾಸಕರ ಭೇಟಿ ಮಾಡಿ ಆಮಿಷ ಒಡ್ಡಿದ್ದರು ಎಂದು ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಎಸ್ ಯಡಿಯೂರಪ್ಪ ಅವರು, ಸಿಎಂ ಕುಮಾರಸ್ವಾಮಿ ಹೇಳಿಕೆ ಸತ್ಯಕ್ಕೆ ದೂರವಾದದ್ದು, ಆರೋಪ ಸತ್ಯವಾಗಿದ್ರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಅವರು ನೀಡಿರುವುದು ಫೇಕ್ ಆಡಿಯೋ, ನಾನು ಸ್ಪೀಕರ್ ಅವರನ್ನೆ ಬುಕ್ ಮಾಡಿದ್ದೇನೆ ಎಂದು ಆರೋಪಿಸಲಾಗಿದೆ, ಆದರೆ ಅದು ನಿಜವೇ ಆದರೆ ನಾನು ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
SCROLL FOR NEXT