ರಾಜ್ಯ

'ನನಗೆ ಅವರು ಬೇಕು ಅಮ್ಮಾ' ಎಂದು ಗೋಗರೆದ ಹುತಾತ್ಮ ಯೋಧ ಗುರುವಿನ ಪತ್ನಿ

Sumana Upadhyaya

ಬೆಂಗಳೂರು: ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ ಎಂ ದೊಡ್ಡಿ ಸಮೀಪ ಗುಡಿಗೆರೆ ಗ್ರಾಮದ ಯೋಧ ಗುರು(33ವರ್ಷ) ಐದು ದಿನಗಳ ಹಿಂದಷ್ಟೇ ರಜೆ ಮುಗಿಸಿಕೊಂಡು ಹೋಗಿ ಕರ್ತವ್ಯಕ್ಕೆ ಹಾಜರಾಗಿದ್ದರು.

ಇವರು ಗುಡಿಗೆರೆ ಗ್ರಾಮದ ಹೊನ್ನಯ್ಯ ಎಂಬುವವರ ಪುತ್ರನಾಗಿದ್ದು ಕಳೆದ 6 ಹಿಂದಷ್ಟೇ ವಿವಾಹವಾಗಿದ್ದರು. ಸಂಕ್ರಾಂತಿ ಸಮಯದಲ್ಲಿ ರಜೆ ಹಾಕಿ ಊರಿಗೆ ಬಂದಿದ್ದು ಒಂದು ತಿಂಗಳು ಇದ್ದು ಕಳೆದ ಫೆಬ್ರವರಿ 10ರಂದು ಹೋಗಿದ್ದರು. ಈ ಬೆನ್ನಲ್ಲೇ ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದು ಅವರ ಪತ್ನಿ ಮತ್ತು ಕುಟುಂಬದವರಿಗೆ ತೀವ್ರ ಆಘಾತವನ್ನುಂಟುಮಾಡಿದೆ.

ಗುರು ಅವರ ಹುಟ್ಟೂರಿನಲ್ಲಿ ಅವರ ಪತ್ನಿ, ತಂದೆ-ತಾಯಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಅವರ ಅಗಲಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪತ್ನಿ ಕಲಾವತಿ ಅಳುತ್ತಿರುವುದು ಎಂತವರ ಮನಸ್ಸನ್ನೂ ಕಲಕದೆ ಇರದು. ''ನಾನು ಪ್ರತಿದಿನ ಅವರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದೆ. ಅವರು ಇಂದು ಬೆಳಗ್ಗೆ 11 ಗಂಟೆಗೆ ಫೋನ್ ಮಾಡಿದ್ದರು. ನಾನು ಕೆಲಸ ಮಾಡುತ್ತಿದ್ದರಿಂದ ಅವರ ಜೊತೆ ಮಾತನಾಡಲು ಸಾಧ್ಯವಾಗಿಲ್ಲ. ಅವರು ಊರಿಂದ ಹೋಗಿ ನಾಲ್ಕು ದಿನಗಳು ಆಗಿರಲಿಲ್ಲ. ತುಂಬಾ ನೋವಾಗುತ್ತಿದೆ ಎಂದು ಕಲಾವತಿ ಅವರು ಕಣ್ಣೀರು ಹಾಕಿದ್ದಾರೆ.

ನನ್ನಿಂದ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುರುವಾರ ಒಂದು ದಿನ ಅವರ ಜೊತೆ ಮಾತನಾಡಿದ್ರೆ ಆಗುತ್ತಿತ್ತು. ನಾನು 6 ಗಂಟೆಯಿಂದ ಫೋನ್ ಮಾಡಿ ಮಾಡಿ ಸಾಕಾಯ್ತು. ನನಗೆ ಅವರು ಬೇಕು ಅಮ್ಮಾ ಎಂದು ತಾಯಿ ಮಡಿಲಲ್ಲಿ ಮಲಗಿಕೊಂಡು ಅಳುತ್ತಿದ್ದಾರೆ.

ಹುಟ್ಟೂರಿನಲ್ಲಿ ಒಂದು ವರ್ಷ ಹಿಂದೆ ಗುರು ಅವರು ನೂತನವಾಗಿ ಕಟ್ಟಿಸಿದ್ದ ಮನೆಯಲ್ಲಿ ಗೃಹ ಪ್ರವೇಶ ಮಾಡಿಕೊಂಡಿದ್ದರು. ಸ್ವಂತ ಮಾವನ ಮಗಳಾದ, ಹಲಗೂರು ಬಳಿಯ ಸಾಸಲಾಪುರ ಗ್ರಾಮದ ಕಲಾವತಿಯನ್ನು ವಿವಾಹವಾಗಿದ್ದರು.

ಗುರು ಅವರ ಸಾವಿನಿಂದ ಅವರ ತಂದೆ-ತಾಯಿ ಮತ್ತು ಸಹೋದರರು ಕೂಡ ತೀವ್ರ ಆಘಾತಕ್ಕೀಡಾಗಿದ್ದಾರೆ.

SCROLL FOR NEXT