ರಾಜ್ಯ

ಅಂಕೋಲಾ: ಜನರ ಗಮನ ಸೆಳೆಯುತ್ತಿರುವ ಪೊಲೀಸ್ ಠಾಣೆ!

Sumana Upadhyaya

ಕಾರವಾರ: ಅಂಕೋಲದಲ್ಲಿರುವ ಪೊಲೀಸ್ ಠಾಣೆ ಸುತ್ತಮುತ್ತಲ ಜನರ ಆಕರ್ಷಣೆಗೆ ಕಾರಣವಾಗಿದೆ. ಪೊಲೀಸ್ ಠಾಣೆಯ ಕಂಪೌಂಡ್ ಗೋಡೆಯಲ್ಲಿ ಬಿಡಿಸಿರುವ ಚಿತ್ತಾಕರ್ಷಕ ಚಿತ್ರ ಮತ್ತು ಬರಹ ಸುತ್ತಮುತ್ತಲ ಜನರನ್ನು, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

ಪೊಲೀಸ್ ಠಾಣೆಯ ಕಂಪೌಂಡ್ ಗೋಡೆಯ ಬರಹಗಳು ಅಂಕೋಲ ತಾಲ್ಲೂಕಿನ ಇತಿಹಾಸ,ಸಂಸ್ಕೃತಿ , ಪ್ರವಾಸಿ ಸ್ಥಳಗಳು ಮತ್ತು ಇತರ ಮಾಹಿತಿಗಳನ್ನು ಜನತೆಗೆ ಸಾರುತ್ತದೆ. ಅಲ್ಲದೆ ಕಾನೂನು ಸುವ್ಯವಸ್ಥೆ ವಿಷಯಗಳ ಬಗ್ಗೆ ಕೂಡ ಅರಿವು ಮೂಡಿಸಲಾಗುತ್ತಿದೆ.

ಜನಸ್ನೇಹಿ ಪೊಲೀಸರ ಪರಿಕಲ್ಪನೆಯಡಿ ಪೊಲೀಸ್ ಠಾಣೆಯನ್ನು ನವೀಕರಣ ಮಾಡಲಾಗಿದೆ. ಠಾಣೆಯ ಹೊರಗೆ 150 ಮೀಟರ್ ಗಳಷ್ಟು ಉದ್ದದ ಕಂಪೌಂಡ್ ಗೋಡೆಯಿದೆ. ಅದಕ್ಕೆ ಇತ್ತೀಚೆಗೆ ಪೈಂಟಿಂಗ್ ಮಾಡಲಾಗಿದೆ. ಇಲ್ಲಿ ವಿವಿಧ ಪೈಂಟಿಂಗ್ ಮಾಡಲು ಅಂಕೋಲಾ ತಾಲ್ಲೂಕಿನ ಚಿತ್ರ ಕಲಾವಿದರು ಸುಮಾರು ಒಂದೂವರೆ ತಿಂಗಳು ತೆಗೆದುಕೊಂಡಿದ್ದಾರೆ.

ಸಮಾಜ ಸುಧಾರಕ ಬಸವಣ್ಣ, ಕವಿ ದಿನಕರ ದೇಸಾಯಿಗಳ ನುಡಿಮುತ್ತುಗಳನ್ನು ಕೂಡ ಬರೆಯಲಾಗಿದೆ. ಅಂಕೋಲಾ ತಾಲ್ಲೂಕಿನ ತಹಸಿಲ್ದಾರ್ ಮತ್ತು ಜೈ ಹಿಂದ್ ಹೈಸ್ಕೂಲ್ ನ ಮಧ್ಯೆ ಈ ಪೊಲೀಸ್ ಠಾಣೆಯಿದ್ದು ಅಂಕೋಲಾ ಬಸ್ ನಿಲ್ದಾಣಕ್ಕೆ ಸಮೀಪದಲ್ಲಿದೆ. ರಸ್ತೆ ಸುರಕ್ಷತೆ, ಆಸ್ತಿ ಅಪರಾಧ, ಸೋಷಿಯಲ್ ಮೀಡಿಯಾ ಜಾಗೃತಿ, ಸೈಬರ್ ಕ್ರೈಂ, ಮೀನುಗಾರರ ಸುರಕ್ಷತೆ, ತುರ್ತು ಸಹಾಯವಾಣಿ ಮತ್ತು ಅಂಕೋಲಾ ತಾಲ್ಲೂಕು ಮ್ಯಾಪ್ ಗಳ ಬಗ್ಗೆ ಕೂಡ ಮಾಹಿತಿ ಇದೆ.

ತಾಲ್ಲೂಕಿನ ಸಮಾಜ ಸುಧಾರಕರು, ದಾನಿಗಳ ಸಹಾಯದಿಂದ ಪೊಲೀಸರು ತಮ್ಮ ಠಾಣೆಯನ್ನು ಸುಂದರಗೊಳಿಸಿದ್ದಾರೆ.

SCROLL FOR NEXT