ರಾಜ್ಯ

ಬೆಂಗಳೂರು: ಪಾರ್ಕ್‌ನಲ್ಲಿ ವಿದ್ಯುತ್‌ ತಂತಿ ತಗುಲಿ ಬಾಲಕ ದಾರುಣ ಸಾವು, 10 ಲಕ್ಷ ರೂ. ಪರಿಹಾರ ಘೋಷಣೆ

Srinivas Rao BV
ಬೆಂಗಳೂರು: ಪಾರ್ಕ್‌ನಲ್ಲಿ ಬಿದ್ದಿದ್ದ ವಿದ್ಯುತ್‌ ತಂತಿ ತಗುಲಿ ಏಳು ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಫೆ.25 ರಂದು ಸಂಜೆ ಬಾಣಸವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉದಯಕುಮಾರ್‌ (7) ಸಾವನ್ನಪ್ಪಿದ ಬಾಲಕ. ನಿನ್ನೆ ಸಂಜೆ ಬಾಣಸವಾಡಿಯ ಕುಳ್ಳಪ್ಪ ವೃತ್ತದ ಬಳಿ ಇರುವ ರಾಜ್‌ ಕುಮಾರ್ ಪಾರ್ಕ್ ನಲ್ಲಿ ಆಟವಾಡುತ್ತಿದ್ದಾಗ, ಅಲ್ಲೇ ಬೆಸ್ಕಾಂ ಸಿಬ್ಬಂದಿ ಹಾಕಿದ್ದ ವಿದ್ಯತ್‌ ತಂತಿ ತಗುಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದಾನೆ.
ಬಾಲಕನ ಸಹೋದರನಿಗೂ ವಿದ್ಯುತ್‌ ತಂತಿ ತಗುಲಿದೆ. ಆದರೆ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಬೆಸ್ಕಾಂ ಸಿಬ್ಬಂದಿ ಪಾರ್ಕ್‌ನ ತೆರೆದ ಜಾಗದಲ್ಲಿ ವಿದ್ಯುತ್ ಹರಿಯುವ ತಂತಿಯನ್ನು ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಹಾಕಿದ್ದರು. ಬಾಲಕ ಅದರ ಮೇಲೆ ಕಾಲಿಟ್ಟಾಗ ವಿದ್ಯುತ್‌ ಹರಿದು ಮೃತಪಟ್ಟಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು  ಸರ್ವಜ್ಞನಗರದ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಕಮಲೇಶ್‌  ಒತ್ತಾಯಿಸಿದ್ದಾರೆ.
ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಕೂಡ ಸ್ಥಳಕ್ಕೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂದು  ಅವರು ಆರೋಪಿಸಿದ್ದಾರೆ. ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಮೃತ ಉದಯ್ ಕುಟುಂಬಕ್ಕೆ ಬಿಬಿಎಂಪಿ ಮೇಯರ್ 10 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. 
SCROLL FOR NEXT