ರಾಜ್ಯ

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಯ ಸುದ್ದಿ; ಗಣ್ಯರು, ಭಕ್ತರು ಮಠಕ್ಕೆ ದೌಡು

Sumana Upadhyaya

ತುಮಕೂರು: 'ನಡೆದಾಡುವ ದೇವರು' ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ವ್ಯತ್ಯಯವುಂಟಾಗಿದೆ ಎಂದು ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದರಿಂದ ನೂರಾರು ಸಂಖ್ಯೆಯಲ್ಲಿ ಗಣ್ಯ ವ್ಯಕ್ತಿಗಳು ಮತ್ತು ಭಕ್ತರು ಸಿದ್ದಗಂಗಾ ಮಠಕ್ಕೆ ಆಗಮಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಹ ನಿನ್ನೆ ಮಠಕ್ಕೆ ಆಗಮಿಸಿ ಶ್ರೀಗಳ ಆರೋಗ್ಯ ವಿಚಾರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನನ್ನನ್ನು ಕಂಡಾಗ ಗುರುತು ಹಿಡಿದು ಮಠದಲ್ಲಿ ಪ್ರಸಾದ ಸ್ವೀಕರಿಸುವಂತೆ ಹೇಳಿದರು ಎಂದು ತಿಳಿಸಿದರು.

ಯಡಿಯೂರಪ್ಪನವರು ಶ್ರೀಗಳನ್ನು ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಬಂದ ಕೂಡಲೇ ಭಕ್ತಾದಿಗಳಲ್ಲಿ ಆತಂಕ, ದುಗುಡ ಮನೆಮಾಡಿತು. ಅಪಾರ ಸಂಖ್ಯೆಯಲ್ಲಿ ಮಠದತ್ತ ಬರಲು ಆರಂಭಿಸಿದರು. ಅವರನ್ನು ನಿಯಂತ್ರಿಸುವುದು ಪೊಲೀಸರಿಗೆ ಕಷ್ಟವಾಯಿತು. ನಂತರ ಸೂಕ್ತ ಬ್ಯಾರಿಕೇಡ್ ಗಳನ್ನು ಹಾಕಿ ಪೊಲೀಸರು ನಿಯಂತ್ರಿಸಿದರು.

ಸದ್ಯ ಶ್ರೀಗಳ ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ದಿನಪೂರ್ತಿ ಅವರ ತಪಾಸಣೆ ಮತ್ತು ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇನ್ನೊಂದೆಡೆ ನಿನ್ನೆ ಮಠದ ಕಿರಿಯ ಶ್ರೀಗಳು ಹೇಳಿಕೆ ನೀಡಿ, ಸಿದ್ದಗಂಗಾ ಶ್ರೀಗಳು ಪಿತ್ತಕೋಶ ಮತ್ತು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಮಠದಲ್ಲೇ ಚಿಕಿತ್ಸೆನೀಡಲಾಗುತ್ತದೆ. ಭಕ್ತರು ಹೆದರುವ ಅಗತ್ಯ ಇಲ್ಲ. ಶ್ರೀಗಳು ಆರೋಗ್ಯವಾಗಿದ್ದಾರೆ. ರೇಲಾ ಆಸ್ಪತ್ರೆ ವೈದ್ಯರ ಮಾರ್ಗದರ್ಶನದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಯಾರೂ ಧೃತಿಗೆಡುವ ಅಗತ್ಯವಿಲ್ಲ ಎಂದಿದ್ದಾರೆ.

SCROLL FOR NEXT