ಮಂಗಳೂರು: ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂದಿಸಿದಂತೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅತ್ತ ಶಬರಿಮಲೆಯಲ್ಲಿ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವೀರೇಂದ್ರ ಹೆಗಡೆ ಅವರು, 'ಇದರಿಂದ ಒಳ್ಳೆದಾಯ್ತಲ್ಲ, ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಇದೇ ವೇಳೆ, 'ಕ್ಷೇತ್ರದ ಆಚಾರ, ಸಂಪ್ರದಾಯ ಪಾಲಿಸುವುದು ಮುಖ್ಯ. ಬ್ರಹ್ಮಚರ್ಯೆ, ಸಂಯಮ ಸಾಧಿಸಿ ವ್ರತಾಚರಣೆ ಮಾಡಿ ಕ್ಷೇತ್ರಕ್ಕೆ ತೆರಳುತ್ತಾರೆ. ಈಗೆಲ್ಲ ಬೆಳಗ್ಗೆ ಮಾಲೆ ಹಾಕಿ ಮಧ್ಯಾಹ್ನ ಸನ್ನಿಧಾನಕ್ಕೆ ಹೋಗುವ ಆಚಾರ ಇದೆ. ಹೀಗಾಗಿ ಇಂತಹ ಅಪಚಾರಗಳಾಗುತ್ತಿದೆ ಎಂದು ಡಾ. ವೀರೇಂದ್ರ ಹೆಗ್ಗಡೆ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಕೇರಳದ ಮಲ್ಲಪ್ಪುರಂ ಮತ್ತು ಕಲ್ಲಿಕೋಟೆಯ ಮಹಿಳೆಯರಾದ ಬಿಂದು ಮತ್ತು ಕನಕ ಮಧ್ಯರಾತ್ರಿ ಶಬರಿಮಲೆ ಬೆಟ್ಟವನ್ನು ಹತ್ತಿ ಬುಧವಾರ ಬೆಳಗ್ಗೆ 3.45ಕ್ಕೆ ದೇವಾಲಯವನ್ನು ಪ್ರವೇಶಿಸಿದ್ದರು. ಈ ಸಮಯದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು ಮತ್ತು ಯಾವುದೇ ಮಾಧ್ಯಮಗಳು ಸಹ ಇರಲಿಲ್ಲ ಎಂದು ತಿಳಿದುಬಂದಿದೆ.