ಎಸ್.ಎಲ್. ಭೈರಪ್ಪ, ಪೇಜಾವರ ಶ್ರೀ
ಮೈಸೂರು: ಶಬರಿಮಲೆಯಂತಹಾ ಧಾರ್ಮಿಕ ವಿಚಾರಗಳು ಕೋರ್ಟ್ ಕಟಕಟೆಗೆ ಬರಬಾರದು. ಇದು ನಂಬಿಕೆಯ ವಿಚಾರವಾಗಿದ್ದು ಇಂತಹ ವಿವಾದಗಳು ನ್ಯಾಯಾಲಯದ ಮೆಟ್ಟಿಲೇರುವುದು ಮೂರ್ಖತನ ಎಂದು ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಭೈರಪ್ಪಶಬರಿಮಲೆ ತೀರ್ಪು ನೀಡಿದ ನ್ಯಾಯಪೀಠದಲ್ಲಿ ಮಹಿಳಾ ನ್ಯಾಯಾಧೀಶರೂ ಇದ್ದರು, ಅವರು ಶಬರಿಮಲೆಗೆ ಮಹಿಳೆ ಪ್ರವೇಶವನ್ನು ವಿರೋಧಿಸಿದ್ದರು. ಆದರೆ ಈಗ ಎಲ್ಲೆಡೆ ಕಮ್ಯೂನಿಸ್ಟ್ ಸಿದ್ದಾಂತವನ್ನೇ ಹರಡಲಾಗುತ್ತಿದೆ ಎಂದು ವಿಷಾದದಿಂದ ನುಡಿದಿದ್ದಾರೆ.
ಬೇರೆ ಬೇರೆ ದೇವಾಲಯಗಳಲ್ಲಿ ಬೇರೆ ಬೇರೆ ರೀತಿಯ ಆಚರಣೆಗಳಿರುತ್ತದೆ.ಅಂತಹವುಗಳನ್ನು ಪ್ರಶ್ನಿಸುವುದು ಅರ್ಥವಿಲ್ಲದ ವಿಚಾರ ಎಂದ ಭೈರಪ್ಪ ಮೈಸೂರು ಚಾಂಮುಂಡಿ ದೇವಿಯು ಮಹಿಷಾಸುರನನ್ನು ಕೊಂದಳು, ಹಾಗೆ ಮಹಿಷಾಸುರನನ್ನು ಕೊಲ್ಲಲು ಪುರುಷ ದೇವತೆಗಳು ಅವಳಿಗೆ ಸಹಾಯ ಮಾಡಿದರು. ಹಾಗೆಂದು ಚಾಮುಂಡಿ ಪುರುಷರಿಗೆ ಅವಮಾನಿಸಿದ್ದಾಳೆ ಎಂದು ನ್ಯಾಯಾಲಯಕ್ಕೆ ಹೋಗಬಹುದೆ ಎಂದು ಪ್ರಶ್ನಿಸಿದ್ದಾರೆ.
ಕೇರಳದಲ್ಲಷ್ಟೇ ಅಲ್ಲದೆ ದೇಶದ ತುಂಬಾ ಕಮ್ಯುನಿಸ್ಟರ ಸಿದ್ದಾಂತ ಹೇರುವ ಕೆಲಸ ವ್ಯವಸ್ಥಿತವಾಗಿ ಸಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಟಸ್ಥವಾಗಿದ್ದೇನೆ: ಪೇಜಾವರ ಶ್ರೀ
ಇನ್ನೊಂದೆಡೆ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತು ಮಾತನಾಡಿದ ಉಡುಪಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಗಳು ತಾವು ಈ ವಿಚಾರದಲ್ಲಿ ತಟಸ್ಥವಾಗಿ ಇರಬಯಸುತ್ತೇನೆ ಎಂದಿದ್ದಾರೆ.
ಸುದ್ದಿಗಾರರೊಡನೆ ಮಾತನಾಡಿದ ಶ್ರೀಗಳು "ಶಬರಿಮಲೆಯ ಕುರಿತು ಶಾಸ್ತ್ರದಲ್ಲಿ ಯಾವುದೇ ಧಕ್ಕೆ ಇಲ್ಲ, ಆದರೆ ಸಂಪ್ರದಾಯದ ಅನುಸಾರ ಅಡ್ಡಿಯುಂಟು. ಶಾಸ್ತ್ರದ ಆಧಾರದ ಮೇಲೆ ಎಲ್ಲಾ ಭಕ್ತರಿಗೆ ದೇವಾಲಯ ಪ್ರವೇಶ ಮುಕ್ತವಾಗಿರುತ್ತದೆ. ಆದರೆ ಶಬರಿಮಲೆ ಸಂಪ್ರದಾಯವೇ ಬೇರಾಗಿರುವ ಕಾರಣ ನಾನು ಈ ವಿಷಯದಲ್ಲಿ ತಟಸ್ಥನಾಗಿರಲು ಬಯಸುತ್ತೇನೆ "ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos