ರಾಜ್ಯ

ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ: ಅತಿಥಿಗಳಿಗೆ ಉಣಬಡಿಸಲು ಶಿಗ್ಲಿಯಲ್ಲಿ ಖಡಕ್ ರೊಟ್ಟಿ ತಯಾರು!

Manjula VN
ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಜ.4ರಿಂದ ಮೂರು ದಿನಗಳ ಕಾಲ ನಡೆಯಲಿರುವ 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳಿಗೆ ಉಣಬಡಿಸಲು ಜಿಲ್ಲಾಡಳಿತ ಭಾರೀ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದಕ್ಕೆ ಅಗತ್ಯವಿರುವ ಸುಮಾರು 1 ಲಕ್ಷ ಕಡಕ್ ರೊಟ್ಟಿಗಳು ಈಗಾಗಲೇ ಗದಗ ಜಿಲ್ಲೆಯ ಶಿಗ್ಲಿ ಗ್ರಾಮದಲ್ಲಿ ಸಿದ್ಧಗೊಳ್ಳುತ್ತಿವೆ. 
ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಲಕ್ಷಾಂತರ ರೊಟ್ಟಿಗಳು ಸಿದ್ಧಗೊಳ್ಳುತ್ತಿವೆ. ಶಿಗ್ಲಿ ಗ್ರಾಮ ಕಸಾಪ ಅಧ್ಯಕ್ಷರಾಗಿರುವ ಮನು ಬಳಿಗಾರ್ ಅವರ ಸ್ವಗ್ರಾಮವಾಗಿದೆ. ಈ ಬಾರಿ ಧಾರವಾಡದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನಲೆಯಲ್ಲಿ ಅವಕಾಶ ಸಿಕ್ಕಿರುವುದರಿಂದ ಅವರೇ ಕಾಳಜಿ ವಹಿಸಿ, ಉತ್ತರ ಕರ್ನಾಟಕದ ಜವಾರಿ ಖಡರ್ ರೊಟ್ಟಿಯನ್ನು ಸ್ವಗ್ರಾಮದಲ್ಲಿಯೇ ಸಿದ್ಧಪಡಿಸುತ್ತಿದ್ದಾರೆ. 
ಗ್ರಾಮದಲ್ಲಿರುವ ಮಹಿಳಾ ಸ್ವಸಹಾಯ ಗುಂಪುಗಳನ್ನು ಒಟ್ಟುಗೂಡಿಸಿ ರೊಟ್ಟಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಮಹಿಳೆಯರು ನಿತ್ಯ ಸಾವಿರಾರು ತೆಳುವಾದ ರೊಟ್ಟಿಗಳನ್ನು ಸಿದ್ಧಪಡಿಸುತ್ತಿದ್ದಾರೆ. 
ರೊಟ್ಟಿಗಳನ್ನು ಸಿದ್ಧಪಡಿಸಿ, ಅದನ್ನು ಒಣಗಿಸಿದ ಬಳಿಕ ಅವುಗಳನ್ನು ಧಾರವಾಡಕ್ಕೆ ರವಾನಿಸಲಾಗುತ್ತಿದೆ. ಧಾರವಾಡ ಜಿಲ್ಲಾ ಆಡಳಿತ ಮಂಡಳಿ ಈ ಜವಾಬ್ದಾರಿಯನ್ನು ಮಧು ಹುಳಗುರ್, ಕಮಲಕ್ಕ ಕುಟ್ಟಪ್ಪನವರ್ ಹಾಗೂ ಶೋಭಾ ಮೇಗಾಲಾನಿ ನೇತೃತ್ವದ ತಂಡಕ್ಕೆ ವಹಿಸಿದ್ದಾರೆ. 
15 ದಿನಗಳಲ್ಲಿ ದಿನಕ್ಕೆ 4,000 ರೊಟ್ಟಿಗಳನ್ನು ಸಿದ್ಧಪಡಿಸುವಂತೆ ಕೆಲಸವನ್ನು ನೀಡಲಾಗಿದೆ. ರೊಟ್ಟಿ ತಯಾರು ಮಾಡುವ ಆಲೋಚನೆಯನ್ನು ಮೊದಲು ಮಾಡಿದ್ದು ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರು. ಧಾರವಾಡಕ್ಕೆ ಬರುವ ಸಾಹಿತ್ಯ ಪ್ರೇಮಿಗಳಿಗೆ ರೊಟ್ಟಿಗಳನ್ನು ವಿತರಿಸಲು ಅವರು ನಿರ್ಧರಿಸಿದ್ದರು ಎಂದು ಧಾರವಾಡ ಜಿಲ್ಲಾ ಆಡಳಿತ ಮಂಡಳಿಯ ಮೂಲಗಳು ಮಾಹಿತಿ ನೀಡಿವೆ. 
ಸಾಹಿತ್ಯ ಸಮ್ಮೇಳನಕ್ಕಾಗಿ ರೊಟ್ಟಿ ತಯಾರು ಮಾಡುತ್ತಿರುವುದಕ್ಕೆ ಬಹಳ ಸಂತಸವಿದೆ, ಶಿಗ್ಲಿ ರೊಟ್ಟಿಯನ್ನು ಕರ್ನಾಟಕದ ಜನರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ನನಗಿದೆ ಎಂದು ಮಧು ಹುಳಗುರ್ ಅವರು ಹೇಳಿದ್ದಾರೆ. 
SCROLL FOR NEXT