ರಾಜ್ಯ

ವಿಧಾನ ಸೌಧದಲ್ಲಿ ಸಿಕ್ಕಿದ ಹಣದ ಬ್ಯಾಗ್; ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯ, ಜೆಡಿಎಸ್ ನಿಂದ ಕಾದು ನೋಡುವ ತಂತ್ರ

Sumana Upadhyaya

ಬೆಂಗಳೂರು: ವಿಧಾನಸೌಧದ ಆವರಣದಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ ಪುಟ್ಟರಂಗ ಶೆಟ್ಟಿ ಅವರ ಸಹಾಯಕನ ಬಳಿಯಿದ್ದ ಬ್ಯಾಗ್ ನಲ್ಲಿ 25 ಲಕ್ಷದ 76 ಸಾವಿರ ರೂಪಾಯಿ ಹಣ ಸಿಕ್ಕಿದ ಪ್ರಕರಣ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆ, ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ವಿರೋಧ ಪಕ್ಷ ಬಿಜೆಪಿಯ ಸದಸ್ಯರು ಮತ್ತು ಮೈತ್ರಿಕೂಟ ಜೆಡಿಎಸ್ ನ ಹಿರಿಯ ಸದಸ್ಯರೇ ಸಚಿವ ಪುಟ್ಟರಂಗ ಶೆಟ್ಟಿ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.

ಕಾಂಗ್ರೆಸ್ ನಾಯಕರು ತಮ್ಮ ಸಚಿವ, ಸಿದ್ದರಾಮಯ್ಯನವರ ಅನುಯಾಯಿ ಪುಟ್ಟರಂಗ ಶೆಟ್ಟಿಯನ್ನು ಬೆಂಬಲಿಸುತ್ತಿದ್ದರೆ ಇತ್ತ ಜೆಡಿಎಸ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ತಮ್ಮ ಆಪ್ತ ಸಹಾಯಕನ ಬ್ಯಾಗ್ ನಲ್ಲಿ ಹಣ ಸಿಕ್ಕಿರುವ ವಿಚಾರದ ಕುರಿತು ತಮಗೇನೂ ಗೊತ್ತಿಲ್ಲ ಎಂದು ಪುಟ್ಟರಂಗ ಶೆಟ್ಟಿಯವರು ಹೇಳುತ್ತಿದ್ದರೆ ಇದು ಮೈತ್ರಿ ಪಕ್ಷಗಳಿಗೆ ಮುಜುಗರವನ್ನುಂಟುಮಾಡಿದೆ.

ನಿನ್ನೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಸಿಎಂ ಕುಮಾರಸ್ವಾಮಿ, ತನಿಖೆ ನಡೆಯುತ್ತಿದೆ. ಇದರಲ್ಲಿ ಯಾರ ಮೇಲೆಯೂ ಪ್ರಭಾವ ಬೀರಲು ನನ್ನ ಅಧಿಕಾರವನ್ನು ದುರ್ಬಳಕೆ ಮಾಡುವುದಿಲ್ಲ. ತನಿಖೆಯಿಂದ ಹೊರಬರುವ ಆಧಾರದ ಮೇಲೆ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ಈ ಮಧ್ಯೆ ಆರೋಪಿ ಟೈಪಿಸ್ಟ್ ಮೋಹನ್ ನನ್ನು ತನಿಖಾಧಿಕಾರಿಗಳು ನಿನ್ನೆ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ತನಿಖಾಧಿಕಾರಿಗಳು ಸಚಿವ ಪುಟ್ಟರಂಗ ಶೆಟ್ಟಿಗೆ ಸಹ ನೊಟೀಸ್ ಕಳುಹಿಸಿದ್ದಾರೆ.

ಬಿಜೆಪಿ ಇದೀಗ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ. ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಅದನ್ನು ಚುನಾವಣಾ ತಂತ್ರವಾಗಿ ಬಳಸಿಕೊಳ್ಳಲು ನೋಡುತ್ತಿದೆ. ನಿನ್ನೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಸರ್ಕಾರದ ಅಧಿಕಾರಿಗಳು ಮತ್ತು ಸಚಿವರು ಹಗಲುದರೋಡೆಯಲ್ಲಿ ನಿರತರಾಗಿದ್ದಾರೆ. ಪ್ರಧಾನಿ ಮೋದಿಯವರು ಸಿದ್ದರಾಮಯ್ಯನವರ ಸರ್ಕಾರ 10% ಸರ್ಕಾರ ಎಂದು ಕರೆದಿದ್ದರು. ಆದರೆ ಈ ಘಟನೆಯಿಂದ ಈ ಸರ್ಕಾರ 20% ಸರ್ಕಾರ ಎಂದು ಸಾಬೀತಾಗಿದೆ ಎಂದರು.

ಸಿಎಂ ಕುಮಾರಸ್ವಾಮಿಯವರು ಅಧಿಕಾರ ವಹಿಸಿಕೊಂಡ ದಿನ ವಿಧಾನಸೌಧದಲ್ಲಿ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳುವುದಾಗಿ ಹೇಳಿದ್ದರು. ಆದರೆ ಈ ಘಟನೆ ನೋಡಿದರೆ ಭ್ರಷ್ಟಾಚಾರ ಎಲ್ಲಿ ನಡೆಯುತ್ತಿದೆ ಎಂದು ಗೊತ್ತಾಗುತ್ತಿದೆ. ಸಚಿವ ಪುಟ್ಟರಂಗ ಶೆಟ್ಟಿ ರಾಜೀನಾಮೆಗೆ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿ ಕುಮಾರ್ ತಿಳಿಸಿದ್ದಾರೆ.

SCROLL FOR NEXT