ರಾಜ್ಯ

ಮಲೆನಾಡು-ಕರಾವಳಿ ಭಾಗದ ರೈಲ್ವೆ ಕಾಮಗಾರಿ ಶೀಘ್ರ ಕೈಗೊಳ್ಳಲು ರೈಲ್ವೆ ಸಚಿವರಿಗೆ ಸಿಎಂ ಒತ್ತಾಯ

Sumana Upadhyaya

ಬೆಂಗಳೂರು: ಶಿವಮೊಗ್ಗ-ಶೃಂಗೇರಿ-ಮಂಗಳೂರು ಭಾಗಗಳನ್ನು ಸಂಪರ್ಕಿಸುವ ಮಲೆನಾಡು-ಕರಾವಳಿ ರೈಲು ಮಾರ್ಗ ಕಾಮಗಾರಿ ಶೀಘ್ರ ಕೈಗೊಳ್ಳುವಂತೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

227 ಕಿಲೋ ಮೀಟರ್ ಉದ್ದದ ರೈಲು ಮಾರ್ಗ ಮಲೆನಾಡು ಮತ್ತು ಕರಾವಳಿ ಭಾಗವನ್ನು ನೇರವಾಗಿ ಸಂಪರ್ಕಿಸುತ್ತದೆ. ಇದರಿಂದ ಈ ಭಾಗಗಳ ಅಡಿಕೆ, ರಬ್ಬರ್ ಮತ್ತು ಕಾಫಿ ಬೆಳೆಗಾರರಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಸುಲಭವಾಗಿ ಒಯ್ಯಲು ಮತ್ತು ಇಲ್ಲಿನ ಧಾರ್ಮಿಕ ಸ್ಥಳಗಳಿಗೆ ಬೇರೆ ಬೇರೆ ಭಾಗಗಳಿಂದ ಬರುವ ಜನರಿಗೆ ಅನುಕೂಲವಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಶ್ ಗೋಯಲ್ ಅವರಿಗೆ ಬರೆದ ಪತ್ರದಲ್ಲಿ ಮುಖ್ಯಮಂತ್ರಿ, ಮಲೆನಾಡು ಭಾಗದ ರೈಲ್ವೆ ಮಾರ್ಗ ಸಮೀಕ್ಷೆ ಕಾರ್ಯ ಮುಗಿದಿದೆ. ಶಿವಮೊಗ್ಗ-ಶೃಂಗೇರಿ ರೈಲ್ವೆ ಮಾರ್ಗ ತುಂಬಾ ಮುಖ್ಯವಾಗಿದ್ದು ಅನೇಕ ಯಾತ್ರಿಕರು ಶೃಂಗೇರಿಗೆ ಹೋಗುತ್ತಾರೆ. ಶೃಂಗೇರಿಯಾಗಿ ಹೋಗುವ ಶಿವಮೊಗ್ಗ-ಮಂಗಳೂರು ರೈಲ್ವೆ ಮಾರ್ಗ 2014-15ರಲ್ಲಿ ಸಮೀಕ್ಷೆ ಕಾರ್ಯ ಮುಗಿದಿದ್ದು ಅದನ್ನು ರೈಲ್ವೆ ಮಂಡಳಿಗೆ ವರದಿ ಸಲ್ಲಿಸಲಾಗಿದೆ. ಈ ಎರಡೂ ರೈಲ್ವೆ ಮಾರ್ಗದ ನಿರ್ಮಾಣ ಶೀಘ್ರವೇ ಕೈಗೊತ್ತಿಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಅಂದಿನ ರೈಲ್ವೆ ಖಾತೆ ಸಚಿವ ಡಿ ವಿ ಸದಾನಂದ ಗೌಡ ಈ ರೈಲ್ವೆ ಮಾರ್ಗಕ್ಕೆ 2014ರಲ್ಲಿ ಸಮೀಕ್ಷೆ ಅನುಮೋದಿಸಿದ್ದರು.

ಚಿಕ್ಕಮಗಳೂರು-ಸಕಲೇಶಪುರ ರೈಲ್ವೆ ಯೋಜನೆ ಮುಂದಿನ ಎರಡು ವರ್ಷಗಳಲ್ಲಿ ಮುಕ್ತಾಯವಾಗಲಿದ್ದು ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.

SCROLL FOR NEXT