ರಾಜ್ಯ

ನೋಬೆಲ್ ಪ್ರಶಸ್ತಿ ಬರದಿದ್ದರೂ ಭೈರಪ್ಪ ದೇಶಾದ್ಯಂತ ಪ್ರಸಿದ್ದರು: ಡಾ. ಕಂಬಾರ ಬಣ್ಣನೆ

Raghavendra Adiga
ಮೈಸೂರು: ನೊಬೆಲ್ ಪ್ರಶಸ್ತಿ ಸಿಗದಿದ್ದರೂ ಭೈರಪ್ಪ ದೇಶಾದ್ಯಂತ ಪ್ರಸಿದ್ದಿ ಪಡೆದಿದ್ದಾರೆ. ಅವರು ನಿಖರವಾಗಿ ವಿಷಯ ಮಂಡನೆ ಮಾಡುತ್ತಾರೆ. ಹೀಗಾಗಿ ಅವರೆದುರು ಮಾತನಾಡಲು ಭಯವಾಗತ್ತೆ. - ಇದು ಸಾಹಿತಿ, ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಕುರಿತಂತೆ ಇನ್ನೋರ್ವ ಮೇರು ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಮಾತುಗಳು.
ಮೈಸೂರಿನಲ್ಲಿ ಇಂದಿನಿಂದ (ಜನವ್ರಿ ೧೯) ಪ್ರಾರಂಭವಾಗಿರುವ ಎರಡು ದಿನಗಳ "ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವ" ಉದ್ಘಾಟಿಸಿ ಕಂಬಾರ ಈ ಮಾತುಗಳನ್ನಾಡಿದ್ದಾರೆ.
"ರವೀಂದ್ರನಾಥ ಟ್ಯಾಗೂರ್ ನೋಬೆಲ್ ಪ್ರಶಸ್ತಿ ಮೂಲಕ ದೇಶಾದ್ಯಂತ ಮನೆಮಾತಾದರು. ಆದರೆ ಭೈರಪ್ಪ ನೊಬೆಲ್ ಪ್ರಶಸ್ತಿ ಸಿಗದಿದ್ದರೂ ದೇಶಾದ್ಯಂತ ಮನೆಮಾತಾಗಿದ್ದಾರೆ. ಅವರ ಒಂದೊಂದು ಕಾದಂಬರಿಯೂ ಒಂದೊಂದು ಕಥನ. ಇದು ಕುಮಾರವ್ಯಾಸನಲ್ಲಿಯೂ ಕಾಣಿಸದು" ಎಂದು ಚಂದ್ರಶೇಖರ ಕಂಬಾರ ಭೈರಪ್ಪನವರನ್ನು ಬಣ್ಣಿಸಿದ್ದಾರೆ.
"ಭೈರಪ್ಪ ಅವರ ಮೇಲೆ ನನಗೆ ಪೂಜ್ಯ ಭಾವನೆ ಇದೆ. ಅವರು ನಿಖರವಾಗಿ, ಖಚಿತವಾಗಿ ವಿಚಾರ ಮಂಡನೆ ಮಾಡುತ್ತಾರೆ. ಹಾಗೆ ಮಾಡುವುದಕ್ಕೆ ನನಗೆ ಸಾಧ್ಯವಿಲ್ಲ." ಎಂದ ಕಂಬಾರ "ನನಗೆ ವೈಯುಕ್ತಿಕವಾಗಿಯೂ ಭೈರಪ್ಪ ಹಲವು ಬಾರಿ ಸಹಾಯ ಮಾಡಿದ್ದಾರೆ. ನಾನು ಮುಳುಗಿದ ಸಮಯದಲ್ಲಿ ನನ್ನನ್ನು ಮೇಲೆತ್ತಿದವರು ಭೈರಪ್ಪ. ಈ ಕಾರಣಕ್ಕಾಗಿ ನಾನು ಅವರಿಗೆ ಕೃತಜ್ಞ ನಾಗಿರಲೇಬೇಕು" ಎಂದರು.
"ಭೈರಪ್ಪ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ.24 ಭಾಷೆಗಳಲ್ಲಿ ಅವರ ಕಾದಂಬರಿಗಳು ಪ್ರಕಟವಾಗಿದೆ ಎಂದರೆ ಅವರು ವ್ಯಾಸ, ವಾಲ್ಮೀಕಿಯಷ್ಟು ಪ್ರಸಿದ್ದರಿದ್ದಾರೆ. ಇಂತಹಾ ಮೇರು ಸಾಹಿತಿಯ ಕುರಿತು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ" ಕಂಬಾರ ಹೇಳಿದ್ದಾರೆ.
ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ, ಲೇಖಕ ಪ್ರಧಾನ ಗುರುದತ್ತ, ಶಪಾಲಿ, ಶತಾವಧಾನಿ ಆರ್. ಗಣೇಶ್, ನಿರ್ದೇಶಕ ಪಿ. ಶೇಷಾದ್ರಿ ಇನ್ನೂ ಹಲವರು ಭಾಗವಹಿಸಿದ್ದರು.
SCROLL FOR NEXT