ರಾಜ್ಯ

ಶೋಕಾಚರಣೆ ಹೊರತಾಗಿಯೂ ಸಮಾಜ ಕಲ್ಯಾಣ ಇಲಾಖೆಯಿಂದ ಕಾರ್ಯಕ್ರಮ, ಬಿಜೆಪಿ ತೀವ್ರ ವಿರೋಧ

Srinivasamurthy VN
ಬೆಂಗಳೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನಲೆಯಲ್ಲಿ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದ್ದು, ಇದರ ನಡುವೆಯೇ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅದ್ಧೂರಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.
ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ 2 ದಿನಗಳ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಈ ಪೈಕಿ ಇಂದು ಸಂವಿಧಾನ ಕುರಿತ ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಚಾಲನೆ ನೀಡಲಿದ್ದಾರೆ. ಸಂಜೆ 4ಗಂಟೆಗೆ ಬಿಗ್ ಬ್ರದರ್ಸ್ ವರ್ಸಸ್ ಮೈ ಫ್ರೀಡಂ ಎಂಬ ವಿಷಯದ ಕುರಿತ ಚರ್ಚೆಯಲ್ಲಿ ನಟ ಪ್ರಕಾಶ್ ರೈ, ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ಹಯ್ಯ ಕುಮಾರ್ ಪಾಲ್ಗೊಳ್ಳಲ್ಲಿದ್ದಾರೆ. 
ಸಂಜೆ 5 ಗಂಟೆಗೆ ದೃಢ ನಿರ್ಧಾರ: ಸಾವಿಂಧಾನಿ ಭರವಸೆಗಳು ಮತ್ತು ಅನುಕೂಲ ಸಿಂಧು ರಾಜಕೀಯ ಕುರಿತ ಚರ್ಚೆಯಲ್ಲಿಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸೇರಿದಂತೆ ಹಲವರು ಪಾಲ್ಗೊಳ್ಳಲ್ಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಇದು ಸಂವಿಧಾನ ಕುರಿತು ಕಾರ್ಯಾಗಾರವಾಗಿದ್ದು, ಹಮೀದ್ ಅನ್ಸಾರಿ ಸೇರಿದಂತೆ ರಾಷ್ಟ್ರಮಟ್ಟದ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಸರ್ಕಾರಿ ಆದೇಶದಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಹೇಳಿದೆ. ಹೀಗಾಗಿ ಕಾರ್ಯಾಗಾರ ಎಂದಿನಂತೆ ನಡೆಯಲಿದೆ. ಸರ್ಕಾರದ ವತಿಯಿಂದ ಯಾರೊಬ್ಬರೂ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನು ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಶ್ರೀಗಳಿಗೆ ಮಾಡುತ್ತಿರುವ ಅಪಮಾನವಾಗಿದೆ. ಶ್ರೀಗಳು ಅಗಲಿರುವ ಈ ಹೊತ್ತಿನಲ್ಲಿ ಇಂತಹ ಕಾರ್ಯಕ್ರಮದ ಅಗತ್ಯವಿಲ್ಲ. ಕೂಡಲೇ ಸರ್ಕಾರ ಈ ಕಾರ್ಯಕ್ರಮವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
SCROLL FOR NEXT