ರಾಜ್ಯ

70ನೇ ಗಣರಾಜ್ಯೋತ್ಸವ: ರಾಜಪಥ್ ನಲ್ಲಿ ಪ್ರತಿಧ್ವನಿಸಲಿದೆ ಕನ್ನಡದ ಹಾಡು

Lingaraj Badiger
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 70ನೇ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಬುಧವಾರ ದೆಹಲಿಯ ರಾಜಪಥ್ ನಲ್ಲಿ ಸ್ತಬ್ಧ ಚಿತ್ರಗಳ ಸಹಿತ ಪೂರ್ಣ ಪ್ರಮಾಣದ ತಾಲೀಮು ನಡೆಸಲಾಗಿದೆ.
ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನದ ಹಿನ್ನೆಲೆ ಈ ಬಾರಿಯ ಗಣರಾಜ್ಯೋತ್ಸವ ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಪರೇಡ್ ನಲ್ಲಿ ಭಾಗವಹಿಸುವ ಎಲ್ಲಾ ರಾಜ್ಯಗಳಿಗೂ ಮಹಾತ್ಮ ಗಾಂಧಿ ವಸ್ತು ವಿಷಯ ಆಧರಿಸಿ ಪ್ರತಿ ರಾಜ್ಯದಲ್ಲಿ ಗಾಂಧಿ ಬಿಟ್ಟು ಹೋಗಿರುವ ನೆನಪುಗಳ ಆಯ್ದು ಸ್ತಬ್ಧ ಚಿತ್ರಗಳನ್ನು ರಚನೆ ಮಾಡಲು ಸೂಚಿಸಲಾಗಿದೆ. ಅದರಂತೆ ಈ ಬಾರಿ ಕರ್ನಾಟಕ ಸಹ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಭಾರತೀಯ ಕಾಂಗ್ರೆಸ್ ಅಧಿವೇಶನ ಕುರಿತ ಸ್ತಬ್ಧ ಚಿತ್ರ ದೇಶದ ಗಮನ ಸೆಳೆಯಲಿದೆ.
ಸ್ತಬ್ಧ ಚಿತ್ರದಲ್ಲಿ ಸರೋಜಿನಿ ನಾಯ್ಡು, ಜವಾಹರ ಲಾಲ್ ನೆಹರು, ಸರ್ದಾರ್ ವಲ್ಲಭಬಾಯ್ ಪಟೇಲರಿಂದ ಧ್ವಜರೋಹಣ, ಸ್ವತಂತ್ರ ಪೂರ್ವ ಮೊಟ್ಟಮೊದಲ ಕಲ್ಪನಾ ಧ್ವಜ ಹಾಗೂ ಬದಲಾವಣೆಗಳ ಚಿತ್ರಣ, ಹಿಂದೂ ಮುಸ್ಲಿಂ ಏಕತೆ, ವಿದೇಶಿ ವಸ್ತುಗಳ ಬಹಿಷ್ಕಾರ, ಖಾದಿಗೆ ಪ್ರೋತ್ಸಾಹ ಅಸ್ಪೃಶ್ಯತೆ ನಿವಾರಣೆ ಧ್ಯೆಯವಾಕ್ಯಗಳು ಇರಲಿವೆ.
ಇದೇ ಮೊದಲ ಬಾರಿಗೆ ರಾಜಪಥದಲ್ಲಿ ಕನ್ನಡದ ಹಾಡು ಕೇಳಿಸಲಿದ್ದು, ಗಾಂಧಿ ನೆನಪಿಗೆ ಹಿನ್ನೆಲೆ ಧ್ವನಿಯಾಗಿ ಹುಯಿಲಗೋಳ ನಾರಾಯಣ ರಾವ್ ರಚನೆಯ `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡಿದು’ ಹಾಡು ಕೇಳಲಿದೆ.
ಕಲಾವಿದ ಶಶಿಧರ ಅಡಪ ಅವರು ಸ್ತಬ್ಧಚಿತ್ರದ ವಿನ್ಯಾಸ ಮಾಡಿದ್ದು, ಇದಕ್ಕಾಗಿ ಪ್ರವೀಣ್ ಡಿ.ರಾವ್ ಅವರು 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಗೆ ಸಂಗೀತ ರಚನೆ ಮಾಡಿದ್ದಾರೆ. ಸ್ತಬ್ಧಚಿತ್ರದ ನಿರ್ಮಾಣಕಾರ್ಯಕ್ಕೆ ಜನವರಿ 5 ರಂದು ಚಾಲನೆ ನೀಡಲಾಗಿತ್ತು. ಬಹುತೇಕ ಸ್ತಬ್ಧಚಿತ್ರದ ಕೆಲಸ ಪೂರ್ಣಗೊಂಡಿದೆ. ಇನ್ನು ಇಂದು ರಾಜಪಥದಲ್ಲಿ ಪೂರ್ಣ ಪ್ರಮಾಣದ ತಾಲೀಮು ನಡೆಸಿದೆ.
SCROLL FOR NEXT