ರಾಜ್ಯ

ಆನಂದ್ ಸಿಂಗ್ ಪ್ರಕರಣದಲ್ಲಿ ಸದ್ಯವೇ ವರದಿ ಸಲ್ಲಿಕೆ: ಡಾ ಜಿ ಪರಮೇಶ್ವರ್

Sumana Upadhyaya

ಬೆಂಗಳೂರು: ಶಾಸಕ ಆನಂದ ಸಿಂಗ್ ಅವರು ನೀಡಿದ ದೂರಿನ‌ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಗಣೇಶನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅವರನ್ನು ಈಗಾಗಲೇ‌ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಜೊತೆಗೆ ನನ್ನ ಅಧ್ಯಕ್ಷತೆಯಲ್ಲಿ‌ ಸಮಿತಿ ರಚಿಸಿದ್ದು, ಸೂಕ್ತ ತನಿಖೆ ನಡೆಸಿ ಪಕ್ಷಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಹೇಳಿದರು.

ಈ ಮಧ್ಯೆ ಇಂದು ಆನಂದ್ ಸಿಂಗ್ ಅವರ ಕಣ್ಣಿನ ಊತ ಕಡಿಮೆಯಾಗದ ಕಾರಣ ಪರೀಕ್ಷೆಗೆಂದು ನಾರಾಯಣ ನೇತ್ರಾಲಯಕ್ಕೆ ಇಂದು ಕರೆದೊಯ್ಯಲಾಯಿತು. ಅವರ ಕಣ್ಣಿನ ಪರೀಕ್ಷೆ ಮಾಡಿದ್ದು, ಕಣ್ಣು ನೋವು ಸಂಪೂರ್ಣವಾಗಿ ಗುಣಮುಖವಾಗಲು ಇನ್ನು ಒಂದೆರಡು ವಾರ ಬೇಕಾಗಬಹುದು. ಅವರ ಕಣ್ಣಿನ ನರಕ್ಕೆ ಯಾವುದೇ ತೊಂದರೆಯಾಗಿಲ್ಲ, ಕಣ್ಣಿನ ದೃಷ್ಟಿ ಚೆನ್ನಾಗಿದೆ ಎಂದರು.

ಬೆಂಗಳೂರಿನ ಸದಾಶಿವನಗರದ ಬಿಡಿಎ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಿದ್ದಗಂಗಾ ಶ್ರೀಗಳ ಗದ್ದುಗೆ ಒಳಗೆ ಪ್ರವೇಶಿಸಲು ಕೆಲವರ ಹೆಸರನ್ನಷ್ಟೇ ಅಂತಿಮ ಮಾಡಲಾಗಿತ್ತು. ಸಿದ್ದಗಂಗಾ ಕಿರಿಯ ಸ್ವಾಮೀಜಿಗಳೇ ಈ ಪಟ್ಟಿ ತಯಾರಿಸಿದ್ದರು. ಇದರ ಜವಾಬ್ದಾರಿಯನ್ನು ಎಸ್‌ಪಿ ದಿವ್ಯಾ ಅವರಿಗೆ ನೀಡಲಾಗಿತ್ತು. ಅವರಿಗೆ ಸಚಿವರ ಮುಖ ಪರಿಚಯ ಇಲ್ಲವೆನಿಸುತ್ತದೆ.‌ ಯಾವುದೂ ಉದ್ದೇಶಪೂರ್ವಕವಾಗಿ ನಡೆದಿಲ್ಲ.‌ ಇದನ್ನು ದೊಡ್ಡದಾಗಿ ಬೆಳೆಸದೇ ಇಲ್ಲಿಗೆ ನಿಲ್ಲಿಸುವುದು ಉತ್ತಮ ಎಂದರು.

ಇದಕ್ಕೂ ಮುನ್ನ ಇನ್‌ಫೋಸಿಸ್‌ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ಡಾ.ಜಿ. ಪರಮೇಶ್ವರ ಅವರನ್ನು‌ ಇಂದು ಭೇಟಿ ಮಾಡಿ ಮೈಸೂರಿನಲ್ಲಿರುವ ನ್ಯಾಷನಲ್‌‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಜಿನಿಯರಿಂಗ್‌ನನ್ನು ಅಭಿವೃದ್ಧಿ ಮಾಡುವ ಸಂಬಂಧ ಚರ್ಚಿಸಿದರು.

ಇದೇ ಸಂಸ್ಥೆಯಲ್ಲಿ ನಾರಾಯಣ ಮೂರ್ತಿ ಅವರು ಸಹ ಶಿಕ್ಷಣ ಪಡೆದಿದ್ದರು. ಹೀಗಾಗಿ ಈ ಸಂಸ್ಥೆಯನ್ನು ಅಂತಾರಾಷ್ಟ್ರೀಯ ದರ್ಜೆಗೆ ಏರಿಸುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸಿದ್ದಾರೆ.‌ ಇದರ ಬಗ್ಗೆ ಚರ್ಚಿಸಿದರು. ಜೊತೆಗೆ ಬೆಂಗಳೂರಿನ‌ ಅಭಿವೃದ್ಧಿ ಬಗ್ಗೆಯೂ ಕೆಲ ಸಲಹೆ ಸೂಚನೆ ನೀಡಿದರು ಎಂದರು.

SCROLL FOR NEXT