ಕಲಬುರಗಿ: ಸಮಾಜಸೇವೆ, ಮಾನವೀಯ ಕೊಡುಗೆಗಳನ್ನು ಯಾವ ರೂಪದಲ್ಲಿಯಾದರೂ ಮಾಡಬಹುದು. ಕಲಬುರಗಿಯ ಆಟೋ ಚಾಲಕರೊಬ್ಬರು ಗರ್ಭಿಣಿಯರಿಗೆ ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಸೇರಿಸಲು ಉಚಿತ ಆಟೋ ಪ್ರಯಾಣ ಸೇವೆ ಒದಗಿಸುತ್ತಾರೆ. ಕಳೆದ 5 ವರ್ಷಗಳಿಂದ ಅವರು ಉಚಿತವಾಗಿ ಈ ಸೇವೆ ನೀಡುತ್ತಿದ್ದಾರೆ.
ಕಲಬುರಗಿಯ ಶಾಂತಿನಗರ ನಿವಾಸಿಯಾಗಿರುವ ಆಟೋ ಚಾಲಕ ಮಲ್ಲಿಕಾರ್ಜುನ ಗರ್ಭಿಣಿಯರಿಗೆ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗಲು ಉಚಿತ ಸೇವೆ ನೀಡುತ್ತಾರೆ.ಮಲ್ಲಿಕಾರ್ಜುನ ಅವರ ಬಳಿ ನಾಲ್ಕು ಆಟೋಗಳಿದ್ದು ಅವುಗಳಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ.
ಹೀಗೆ ಉಚಿತ ಸೇವೆ ಆರಂಭಿಸಲು ಪ್ರೇರಣೆಯಾದ ಘಟನೆಯನ್ನು ಮಲ್ಲಿಕಾರ್ಜುನ್ ಹೀಗೆ ಹೇಳಿಕೊಳ್ಳುತ್ತಾರೆ; 5 ವರ್ಷಗಳ ಹಿಂದೆ ನನ್ನ ಸೋದರಿ ಗರ್ಭಿಣಿಯಾಗಿದ್ದಾಗ ಆಸ್ಪತ್ರೆಗೆ ಹೋಗಲು ಸಮಸ್ಯೆ ಅನುಭವಿಸಿದ್ದಳು. ಆಗ ಆಂಬ್ಯುಲೆನ್ಸ್ ಇರಲಿಲ್ಲ. ಇದೇ ಸಮಸ್ಯೆ ಬೇರೆ ಮಹಿಳೆಯರಿಗೆ ಬರಬಾರದು ಎಂದು ನಾನು ಈ ಸೇವೆ ಆರಂಭಿಸಿದೆ ಎನ್ನುತ್ತಾರೆ ಮಲ್ಲಿಕಾರ್ಜುನ.
ಕಳೆದ 5 ವರ್ಷಗಳಿಂದ 100ಕ್ಕೂ ಹೆಚ್ಚು ಗರ್ಭಿಣಿಯರು ಉಚಿತವಾಗಿ ಮಲ್ಲಿಕಾರ್ಜುನ ಬಳಿ ಸೇವೆ ಪಡೆದಿದ್ದಾರೆ.