ರಾಜ್ಯ

ಯುವಕರಿಗೂ ಸೇಫ್​ ಅಲ್ಲ ಮೆಜೆಸ್ಟಿಕ್: '500 ರೂ ಕೊಟ್ಟು ಬಾ' ಎಂದ ಮಹಿಳೆಯರು, ಆಮೇಲೆ ನಡೆದ್ದದು ಆಘಾತಕಾರಿ!

Srinivasamurthy VN
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಮಹಿಳಾ ದರೋಡೆಕೋರರ ಹಾವಳಿ ಹೆಚ್ಚಾಗಿದ್ದು, ಬಸ್ಸಿಗಾಗಿ ಕಾಯುತ್ತಿದ್ದ ಯುವಕನಿಗೆ ಮಹಿಳೆಯರ ತಂಡವೊಂದು 'ಆಮಿಷ' ಒಡ್ಡಿ ಕಾರಿನಲ್ಲಿ ಕೂರಿಸಿಕೊಂಡು ದರೋಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹೃದಯಭಾಗದಲ್ಲಿರುವ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಇದೀಗ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಮಾಧ್ಯಮವೊಂದರ ವರದಿ ಪ್ರಕಾರ ಮಣಿಕಂಠ ಎಂಬ ಯುವಕ ಕಳೆದ ಶನಿವಾರ ರಾತ್ರಿ ಸುಮಾರು 12.15ರ ಸುಮಾರಿನಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ. ಈ ವೇಳೆ ಅಲ್ಲಿಗೆ ಆಗಮಿಸಿದ ಇಬ್ಬರು ಮಹಿಳೆಯರು ಆತನಿಗೆ 500 ರೂ ಕೊಟ್ಟು ಲೈಂಗಿಕ ಕ್ರಿಯೆಗೆ ಬಾ ಎಂದು ಕರೆದಿದ್ದಾರೆ. ಆರಂಭದಲ್ಲಿ ಮಣಿಕಂಠ ಇದಕ್ಕೆ ನಿರಾಕರಿಸಿದನಾದರೂ, ಮಹಿಳೆಯರೇ ಆತನನ್ನು ಬಲವಂತವಾಗಿ ಕರೆದೊಯ್ದು ಆಟೋದಲ್ಲಿ ಕೂರಿಸಿದ್ದಾರೆ.
ಬಳಿಕ ಆತನಿಂದ ಆತನ ಪರ್ಸ್ ಹಾಗೂ ಹಣ, ಚೈನ್ ಕಿತ್ತುಕೊಳ್ಳಲು ಮಹಿಳೆಯರು ಯತ್ನಿಸಿದ್ದು, ಈ ವೇಳೆ ಪ್ರತಿರೋಧ ತೋರಿದ ಮಣಿಕಂಠ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಕಿರುಚಾಡಲು ಆರಂಭಿಸಿದ ಮಹಿಳೆಯರು ಆತ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಕಿರುಚಿಕೊಂಡಿದ್ದಾರೆ. ಅಲ್ಲದೆ ನೀನು ನಮ್ಮ ಮೇಲೆ ಅತ್ಯಾಚಾರ ಮಾಡಿದ್ದೀಯ ಎಂದು ದೂರು ನೀಡುತ್ತೇವೆ. ಜನರನ್ನು ಸೇರಿಸಿ ಗಲಾಟೆ ಮಾಡುತ್ತೇವೆ ಎಂದು ಬೆದರಿಸಿ ಆತನಿಂದ ಪರ್ಸ್, ಹಣ ಮತ್ತು ಚೈನ್ ದೋಚಿ ಪರಾರಿಯಾದ್ದಾರೆ.
ಮಹಿಳೆಯರಿಂದ ಪಾರಾದ ಮಣಿಕಂಠ ಬಳಿಕ ಸಾವರಿಸಿಕೊಂಡು ಸಮೀಪದ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ತೆರಳಿ ಮಹಿಳೆಯರ ವಿರುದ್ಧ ಬೆದರಿಕೆ ಹಾಗೂ ದರೋಡೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
SCROLL FOR NEXT